ಬೆಂಗಳೂರು: ಸಾರ್ವಜನಿಕರಿಗೆ ಆಸ್ತಿ ಸಂಬಂಧಿತ ಸೇವೆಗಳನ್ನು ಸುಲಭವಾಗಿ ಮತ್ತು ತ್ವರಿತವಾಗಿ ಒದಗಿಸುವ ಉದ್ದೇಶದಿಂದ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ‘ನನ್ನ ಇ-ಖಾತಾ, ನನ್ನ ಹಕ್ಕು’ ಅಭಿಯಾನದಡಿ ನಗರದ 12 ಉಪವಿಭಾಗಗಳಲ್ಲಿ ಏಕಕಾಲಕ್ಕೆ ಇ-ಖಾತಾ ಮೇಳ ಆಯೋಜಿಸಲಾಗಿತ್ತು. ಮೇಳದಲ್ಲಿ ಒಂದೇ ದಿನ 254 ಹೊಸ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಹಿಂದಿನ ಬಾಕಿ ಅರ್ಜಿಗಳೂ ಸೇರಿದಂತೆ ಒಟ್ಟು 93 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ತಿಳಿಸಿದ್ದಾರೆ.
ಜೆ.ಪಿ. ನಗರದ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯಲ್ಲಿ ನಡೆಯುತ್ತಿದ್ದ ಖಾತಾ ಮೇಳಕ್ಕೆ ಭೇಟಿ ನೀಡಿದ ಆಯುಕ್ತರು, ಸಾರ್ವಜನಿಕರಿಗೆ ಒದಗಿಸಲಾಗುತ್ತಿರುವ ಸೇವೆಗಳು ಹಾಗೂ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯನ್ನು ಪರಿಶೀಲಿಸಿದರು.
ಸ್ಥಳದಲ್ಲೇ ಇ-ಖಾತಾ ವಿತರಣೆಗೆ ಸೂಚನೆ
ಮ್ಯಾನುಯಲ್ ಖಾತಾದಿಂದ ಇ-ಖಾತಾಗೆ ಬದಲಾವಣೆ, ಹೊಸ ಖಾತಾ ನೋಂದಣಿ, ಖಾತಾ ತಿದ್ದುಪಡಿ ಸೇರಿದಂತೆ ವಿವಿಧ ಸೇವೆಗಳಿಗಾಗಿ ಸಾರ್ವಜನಿಕರು ಸಲ್ಲಿಸುತ್ತಿರುವ ಅರ್ಜಿಗಳನ್ನು ಪರಿಶೀಲಿಸಿದ ಅವರು, ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಬೇಕು. ಅಗತ್ಯ ದಾಖಲೆಗಳನ್ನು ಸ್ಥಳದಲ್ಲೇ ಸ್ಕ್ಯಾನ್ ಮಾಡಿ, ಪರಿಶೀಲನೆ ಪೂರ್ಣಗೊಂಡ ಬಳಿಕ ಸಾಧ್ಯವಾದಷ್ಟು ತ್ವರಿತವಾಗಿ ಇ-ಖಾತಾ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ವಿವಿಧ ಸೇವೆಗಳ ಅರ್ಜಿ ವಿಲೇವಾರಿ
ಮೇಳದಲ್ಲಿ ಇ-ಖಾತಾ ವಿಭಾಗದಲ್ಲಿ 108 ಅರ್ಜಿಗಳು ಸ್ವೀಕೃತವಾಗಿದ್ದು, ಹಿಂದಿನ ಒಂದು ಬಾಕಿ ಅರ್ಜಿ ಸೇರಿದಂತೆ ಒಟ್ಟು 26 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 83 ಅರ್ಜಿಗಳು ಬಾಕಿ ಉಳಿದಿವೆ. ಖಾತಾ ವರ್ಗಾವಣೆ ವಿಭಾಗದಲ್ಲಿ 21 ಹೊಸ ಅರ್ಜಿಗಳು ಸ್ವೀಕೃತವಾಗಿದ್ದು, ಹಿಂದಿನ 14 ಬಾಕಿ ಅರ್ಜಿಗಳೂ ಸೇರಿದಂತೆ ಒಟ್ಟು 21 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಪ್ರಸ್ತುತ 14 ಅರ್ಜಿಗಳು ಬಾಕಿ ಇವೆ.
ಖಾತಾ ತಿದ್ದುಪಡಿ ವಿಭಾಗದಲ್ಲಿ 96 ಅರ್ಜಿಗಳು ಸ್ವೀಕೃತವಾಗಿದ್ದು, ಹಿಂದಿನ ನಾಲ್ಕು ಬಾಕಿ ಅರ್ಜಿಗಳೊಂದಿಗೆ ಒಟ್ಟು 42 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 58 ಅರ್ಜಿಗಳು ಬಾಕಿ ಉಳಿದಿವೆ. ಬಿ ಖಾತಾದಿಂದ ಎ ಖಾತೆಗೆ ವರ್ಗಾವಣೆ ಸಂಬಂಧ 13 ಅರ್ಜಿಗಳು ಸ್ವೀಕೃತವಾಗಿದ್ದು, ಹಿಂದಿನ ನಾಲ್ಕು ಬಾಕಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಹೊಸ ಖಾತೆಗಾಗಿ 16 ಅರ್ಜಿಗಳು ಸಲ್ಲಿಕೆಯಾಗಿವೆ.
ಒಟ್ಟಾರೆ ಮೇಳದಲ್ಲಿ 305 ನಾಗರಿಕರು ಭಾಗವಹಿಸಿದ್ದು, ತಾಂತ್ರಿಕ ನೆರವಿಗಾಗಿ ಎರಡು ಇ-ಟಿಕೆಟ್‌ಗಳನ್ನು ದಾಖಲಿಸಲಾಗಿದೆ. ಇ-ಖಾತಾ, ಹೊಸ ಖಾತೆ ಹಾಗೂ ಬಿ ಖಾತಾದಿಂದ ಎ ಖಾತೆಗೆ ಸಂಬಂಧಿಸಿದಂತೆ 17 ಪ್ರತ್ಯೇಕ ಹೊಸ ಅರ್ಜಿಗಳನ್ನೂ ಸ್ವೀಕರಿಸಲಾಗಿದೆ.
12 ಉಪವಿಭಾಗಗಳಲ್ಲಿ ಏಕಕಾಲಕ್ಕೆ ಮೇಳ
ಜಯನಗರ ಮತ್ತು ಬೊಮ್ಮನಹಳ್ಳಿ ವಲಯಗಳ ಅಂಜನಾಪುರ, ಯಲಚೇನಹಳ್ಳಿ, ಉತ್ತರಹಳ್ಳಿ, ಬೇಗೂರು, ಜೆ.ಪಿ. ನಗರ, ಪದ್ಮನಾಭನಗರ, ಜಯನಗರ, ಬೊಮ್ಮನಹಳ್ಳಿ, ಕೋರಮಂಗಲ, ಬಿ.ಟಿ.ಎಂ. ಲೇಔಟ್, ಅರಕೆರೆ ಹಾಗೂ ಎಚ್.ಎಸ್.ಆರ್. ಲೇಔಟ್ ಸೇರಿದಂತೆ 12 ಉಪವಿಭಾಗಗಳ ಕೇಂದ್ರಗಳಲ್ಲಿ ಮೇಳ ಆಯೋಜಿಸಲಾಗಿತ್ತು.
ಮೇಳದಲ್ಲಿ ಸಾರ್ವಜನಿಕರ ಅರ್ಜಿಗಳನ್ನು ಸ್ಥಳದಲ್ಲೇ ಪರಿಶೀಲಿಸಿ, ಖಾತಾ ಸೇವೆಗಳ ಪ್ರಕ್ರಿಯೆ, ದಾಖಲೆಗಳ ದೃಢೀಕರಣ ಹಾಗೂ ಬಾಕಿ ಅರ್ಜಿಗಳ ಸ್ಥಿತಿಗತಿ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು.
‘ನನ್ನ ಇ-ಖಾತಾ, ನನ್ನ ಹಕ್ಕು’ ಅಭಿಯಾನದ ಮೂಲಕ ಆಸ್ತಿ ಸಂಬಂಧಿತ ಸೇವೆಗಳನ್ನು ಪಾರದರ್ಶಕವಾಗಿ, ಕಾಲಮಿತಿಯೊಳಗೆ ಒದಗಿಸುವುದು ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸುವುದು ಪಾಲಿಕೆಯ ಉದ್ದೇಶವಾಗಿದೆ ಎಂದು ಆಯುಕ್ತ ಕೆ.ಎನ್. ರಮೇಶ್ ತಿಳಿಸಿದರು.
