ನವದೆಹಲಿ: ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ವಹಿವಾಟಿನ ಪರಿಷ್ಕೃತ ಶುಲ್ಕ ನೀತಿಯಡಿ ವ್ಯಾಪಾರಿಗಳು ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಶುಲ್ಕವನ್ನು ಗ್ರಾಹಕರ ಮೇಲೆ ಹೊರಿಸುವಂತಿಲ್ಲ ಎಂದು ರಾಷ್ಟ್ರೀಯ ಪಾವತಿ ನಿಗಮ (NPCI) ಸುಪ್ರೀಂ ಕೋರ್ಟ್ಗೆ ಸ್ಪಷ್ಟಪಡಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠಕ್ಕೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಎನ್ಪಿಸಿಐ ಈ ಮಾಹಿತಿ ನೀಡಿದೆ. ಅಲ್ಲದೆ, ಯುಪಿಐ ಆ್ಯಪ್ಗಳನ್ನು ಒದಗಿಸುವ ಸಂಸ್ಥೆಗಳು ಹಣ ಪಾವತಿ ಮಾಡುವ ಬಳಕೆದಾರರಿಂದ ಯಾವುದೇ ಪ್ಲಾಟ್ಫಾರ್ಮ್ ಶುಲ್ಕ ಅಥವಾ ಇತರ ಹೆಚ್ಚುವರಿ ಶುಲ್ಕಗಳನ್ನು ವಸೂಲಿ ಮಾಡುವಂತಿಲ್ಲ ಎಂದು ತಿಳಿಸಿದೆ.
ಎಂಡಿಆರ್ ಶುಲ್ಕದ ನೆಪದಲ್ಲಿ ವ್ಯಾಪಾರಿಗಳು ಚಿಲ್ಲರೆ ವಸ್ತುಗಳ ಬೆಲೆ ಹೆಚ್ಚಿಸಬಹುದು ಎಂಬ ಆತಂಕವನ್ನು ಎನ್ಪಿಸಿಐ ತಳ್ಳಿಹಾಕಿದೆ. ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಮೊತ್ತದ ವಹಿವಾಟುಗಳಿಗೆ ಮಾತ್ರ ಸೀಮಿತವಾಗಿ ಅನ್ವಯಿಸುವ ಈ ಶುಲ್ಕದ ಕಾರಣಕ್ಕೆ ಎಲ್ಲ ಗ್ರಾಹಕರಿಗೂ ಬೆಲೆ ಏರಿಕೆಯ ಹೊರೆ ವರ್ಗಾಯಿಸುವುದು ಸಮಂಜಸವಲ್ಲ ಎಂದು ನಿಗಮ ವಾದಿಸಿದೆ.
ಎನ್ಪಿಸಿಐ ನೀಡಿರುವ ವಿವರಣೆಯಂತೆ, ಗರಿಷ್ಠ ಶೇ.0.4ರಷ್ಟು ಎಂಡಿಆರ್ ಶುಲ್ಕವು 2,000 ರೂಪಾಯಿಗಿಂತ ಹೆಚ್ಚಿನ ಮೊತ್ತದ ವ್ಯಕ್ತಿಯಿಂದ ವ್ಯಾಪಾರಿಗೆ (P2M) ನಡೆಯುವ ವಹಿವಾಟುಗಳಿಗೆ ಮಾತ್ರ ಅನ್ವಯಿಸುತ್ತದೆ. ದೇಶದ ಒಟ್ಟು ಯುಪಿಐ P2M ವಹಿವಾಟುಗಳಲ್ಲಿ ಸುಮಾರು ಶೇ.96ರಷ್ಟು ವಹಿವಾಟುಗಳು ಉಚಿತವಾಗಿರಲಿದ್ದು, ಕೇವಲ ಶೇ.4ರಷ್ಟು ವಹಿವಾಟುಗಳಿಗೆ ಮಾತ್ರ ಈ ಶುಲ್ಕ ಅನ್ವಯಿಸಲಿದೆ.
ಇದಲ್ಲದೆ, ವ್ಯಕ್ತಿಯಿಂದ ವ್ಯಕ್ತಿಗೆ (P2P) ನಡೆಯುವ ಎಲ್ಲ ಹಣ ವರ್ಗಾವಣೆಗಳು ಹಾಗೂ ತಿಂಗಳಿಗೆ ಒಂದು ಲಕ್ಷ ರೂಪಾಯಿವರೆಗೆ ಪಾವತಿ ಸ್ವೀಕರಿಸುವ ಸಣ್ಣ ವ್ಯಾಪಾರಿಗಳ (P2PM) ವಹಿವಾಟುಗಳಿಗೆ ಯಾವುದೇ ಎಂಡಿಆರ್ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
