ಬೆಂಗಳೂರು: ‘ಬಿಗ್ಬಾಸ್ ಕನ್ನಡ ಸೀಸನ್ 11’ರ ಮೂಲಕ ಜನಪ್ರಿಯತೆ ಗಳಿಸಿದ್ದ ನಟ ಶಿಶಿರ್ ಶಾಸ್ತ್ರಿ ಹಾಗೂ ನಟಿ ಐಶ್ವರ್ಯಾ ಸಿಂಧೋಗಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಬಹುದಿನಗಳಿಂದ ಇವರಿಬ್ಬರ ಸಂಬಂಧದ ಬಗ್ಗೆ ಹರಿದಾಡುತ್ತಿದ್ದ ವದಂತಿಗಳಿಗೆ ತೆರೆ ಎಳೆದಿರುವ ಜೋಡಿ, ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳುವುದಾಗಿ ಅಧಿಕೃತವಾಗಿ ಘೋಷಿಸಿದೆ.
ಬಿಗ್ಬಾಸ್ ಮನೆಯಿಂದ ಹೊರಬಂದ ಬಳಿಕವೂ ಶಿಶಿರ್ ಹಾಗೂ ಐಶ್ವರ್ಯಾ ಆತ್ಮೀಯ ಸ್ನೇಹಿತರಾಗಿ ಗುರುತಿಸಿಕೊಂಡಿದ್ದರು. ಇಬ್ಬರೂ ಜೊತೆಯಾಗಿ ಸುತ್ತಾಡುವುದು, ರೀಲ್ಸ್ ಹಂಚಿಕೊಳ್ಳುವುದು ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು. ಇದರಿಂದಾಗಿ ಅಭಿಮಾನಿಗಳು ಇವರಿಬ್ಬರೂ ಪ್ರೀತಿಸುತ್ತಿದ್ದಾರೆ ಎಂದು ಊಹಿಸಿದ್ದರು. ಆದರೆ, ತಮ್ಮ ಸಂಬಂಧದ ಬಗ್ಗೆ ಕೇಳಿದಾಗಲೆಲ್ಲಾ ತಾವು ಕೇವಲ ಸ್ನೇಹಿತರು ಎಂದೇ ಹೇಳುತ್ತಿದ್ದರು.
ಇದೀಗ ತಮ್ಮ ಹೊಸ ವಿಡಿಯೋ ಮೂಲಕ ಎಲ್ಲಾ ಕುತೂಹಲಗಳಿಗೆ ಉತ್ತರ ನೀಡಿದ್ದಾರೆ. ‘ಬಿಗ್ ಅನೌನ್ಸ್ಮೆಂಟ್’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಹಂಚಿಕೊಂಡಿರುವ ಈ ಜೋಡಿ, ತಾವು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
“ಊಹೆಗಳ ಹಿಂದೆ ಒಂದು ಕಥೆಯಿತ್ತು… ನಗುವಿನ ಹಿಂದೆ ಒಂದು ಪ್ರೀತಿಯಿತ್ತು… ಕಾಮೆಂಟ್ಗಳ ಹಿಂದೆ ನಿಮ್ಮ ಕುತೂಹಲವಿತ್ತು… ಇಂದು ಆ ಕಥೆಗೆ ಒಂದು ಸುಂದರವಾದ ಹೆಸರಿದೆ — AISHIR! ಇಷ್ಟು ದಿನ ನಮ್ಮ ಕಥೆಯನ್ನು ನಿಮ್ಮದೇ ಕಥೆಯಂತೆ ಪ್ರೀತಿಸಿದ ಎಲ್ಲರಿಗೂ ಧನ್ಯವಾದಗಳು” ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.
‘ತಂಗಿ’ ಎಂದಿದ್ದ ವಿಡಿಯೋ ಬಗ್ಗೆಯೂ ಸ್ಪಷ್ಟನೆ!
ಹಿಂದೆ ನಡೆದ ಸಂದರ್ಶನವೊಂದರಲ್ಲಿ ಶಿಶಿರ್ ಶಾಸ್ತ್ರಿ, ಐಶ್ವರ್ಯಾ ಅವರನ್ನು ‘ತಂಗಿ’ ಎಂದು ಕರೆದಿದ್ದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಶಿಶಿರ್, ಆ ಸಂದರ್ಶನದಲ್ಲಿ ಕೇಳುವ ಪ್ರಶ್ನೆಗಳಿಗೆ ತಪ್ಪು ಉತ್ತರ ನೀಡಬೇಕು ಎಂಬ ನಿಯಮವಿತ್ತು. ಹಾಗಾಗಿ ಐಶ್ವರ್ಯಾ ತನಗೆ ಏನಾಗಬೇಕು ಎಂಬ ಪ್ರಶ್ನೆಗೆ ತಮಾಷೆಯಾಗಿ ‘ತಂಗಿ’ ಎಂದು ಉತ್ತರಿಸಿದ್ದಾಗಿ ಹೇಳಿದ್ದಾರೆ.
ಇನ್ನು ತಮ್ಮ ಸಂಬಂಧದ ಕುರಿತು ಮಾತನಾಡಿರುವ ಜೋಡಿ, ಅಭಿಮಾನಿಗಳು ತಮ್ಮನ್ನು ಅಣ್ಣ-ತಂಗಿ, ಪ್ರೇಮಿಗಳು, ಸ್ನೇಹಿತರು ಅಥವಾ ಸಿಚುಯೇಷನ್ಶಿಪ್ನಲ್ಲಿರುವವರು ಎಂದುಕೊಂಡಿದ್ದರು. ಆದರೆ, ತಾವು ಯಾವುದೇ ‘ಶಿಪ್’ನಲ್ಲಿಲ್ಲ, ಬದಲಾಗಿ ಜೀವನವೆಂಬ ಶಿಪ್ನಲ್ಲಿ ಒಟ್ಟಿಗೆ ಪ್ರಯಾಣಿಸಲು ನಿರ್ಧರಿಸಿದ್ದೇವೆ ಎಂದು ತಮಾಷೆಯಾಗಿ ಹೇಳಿಕೊಂಡಿದ್ದಾರೆ.
ಇನ್ನು ಮುಂದೆ ‘AISHIR’ ಕೇವಲ ಹ್ಯಾಶ್ಟ್ಯಾಗ್ ಆಗಿ ಉಳಿಯುವುದಿಲ್ಲ. ಅದು ತಮ್ಮಿಬ್ಬರ ಪ್ರೀತಿಯ ಬಂಧದ ಗುರುತಾಗಲಿದೆ ಎಂದು ಹೇಳುವ ಮೂಲಕ ಎಂಗೇಜ್ಮೆಂಟ್ ಸುದ್ದಿಯನ್ನು ಖಚಿತಪಡಿಸಿದ್ದಾರೆ.
ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಜೋಡಿ
ಸದ್ಯ ಶಿಶಿರ್ ಶಾಸ್ತ್ರಿ ‘ಶ್ರೀಗಂಧದ ಗುಡಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಐಶ್ವರ್ಯಾ ಸಿಂಧೋಗಿ ಕೂಡ ತಮ್ಮ ನಟನಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ತಮ್ಮ ಪ್ರೀತಿಯ ವಿಚಾರವನ್ನು ಅಧಿಕೃತಗೊಳಿಸಿರುವ ಈ ಜೋಡಿಯ ಮದುವೆ ಯಾವಾಗ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ.
