ಬೆಂಗಳೂರು: ಭಾರತೀಯ ವಯಸ್ಕರಲ್ಲಿ ಆರೋಗ್ಯಕರ ವಯಸ್ಸಾಗುವಿಕೆಯ ಕುರಿತ ವೈಜ್ಞಾನಿಕ ತಿಳುವಳಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಹರ್ಬಲೈಫ್ ಇಂಡಿಯಾ ಮತ್ತು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಜಂಟಿಯಾಗಿ ಮಹತ್ವದ ಬಹುಕೇಂದ್ರಿತ ಸಂಶೋಧನಾ ಅಧ್ಯಯನವನ್ನು ಆರಂಭಿಸಿವೆ.
ಆರೋಗ್ಯ ಮತ್ತು ಸಂತೋಷದ ಪರಿಕಲ್ಪನೆಯಡಿ ರೂಪಿಸಿರುವ ಈ ಅಧ್ಯಯನವು ಪೋಷಣೆ, ಜೀವನಶೈಲಿ, ಚಯಾಪಚಯ ಆರೋಗ್ಯ, ಸಾಮಾಜಿಕ ಸಂಪರ್ಕ ಹಾಗೂ ಸ್ವಾಸ್ಥ್ಯ ಬೆಂಬಲ ವ್ಯವಸ್ಥೆಗಳು ಆರೋಗ್ಯಕರ ವಯಸ್ಸಾಗುವಿಕೆಯ ಮೇಲೆ ಬೀರುವ ಪರಿಣಾಮಗಳನ್ನು ವಿಶ್ಲೇಷಿಸಲಿದೆ. ಬೆಂಗಳೂರು, ಮೈಸೂರು, ಹೈದರಾಬಾದ್ ಮತ್ತು ಚೆನ್ನೈ ನಗರಗಳಲ್ಲಿ ಈ ಸಂಶೋಧನೆ ನಡೆಯಲಿದೆ.
ಅಧ್ಯಯನದಲ್ಲಿ 1,000ಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದು, ಪ್ರತಿಯೊಬ್ಬರನ್ನೂ ಸುಮಾರು ಆರು ತಿಂಗಳ ಕಾಲ ಪರಿಶೀಲಿಸಲಾಗುತ್ತದೆ. ಈ ಅವಧಿಯಲ್ಲಿ ದೈಹಿಕ ಆರೋಗ್ಯ, ಚಯಾಪಚಯ ಸೂಚಕಗಳು, ಕರುಳಿನ ಮೈಕ್ರೋಬಯೋಮ್ ಸಂಯೋಜನೆ, ಪೋಷಣೆ, ಜೀವನಶೈಲಿ ಅಭ್ಯಾಸಗಳು ಹಾಗೂ ಜೈವಿಕ ಮಾರ್ಕರ್‌ಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಈ ಮೂಲಕ ವಯಸ್ಸಾಗುವ ಪ್ರಕ್ರಿಯೆಯಲ್ಲಿ ದೇಹದ ಆರೋಗ್ಯ ಮತ್ತು ಒಟ್ಟಾರೆ ಸ್ವಾಸ್ಥ್ಯದ ಮೇಲೆ ಪ್ರಭಾವ ಬೀರುವ ಅಂಶಗಳನ್ನು ಗುರುತಿಸುವ ಗುರಿ ಹೊಂದಲಾಗಿದೆ.
ಭಾರತದಲ್ಲಿ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ದೀರ್ಘಕಾಲ ಬದುಕುವುದಷ್ಟೇ ಅಲ್ಲದೆ ಉತ್ತಮ ಆರೋಗ್ಯ ಮತ್ತು ಜೀವನಮಟ್ಟದೊಂದಿಗೆ ಬದುಕುವ ಮಹತ್ವವೂ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಭಾರತೀಯರ ಜೀವನಶೈಲಿಗೆ ಸಂಬಂಧಿಸಿದ ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹಿಸುವುದು ಅಧ್ಯಯನದ ಪ್ರಮುಖ ಉದ್ದೇಶವಾಗಿದೆ.
ಈ ಕುರಿತು ಮಾತನಾಡಿದ ಹರ್ಬಲೈಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಯ್ ಖನ್ನಾ, ಉತ್ತಮ ಪೋಷಣೆ, ದೈಹಿಕ ಚಟುವಟಿಕೆ ಮತ್ತು ಪ್ರೇರಣಾದಾಯಕ ಸಮುದಾಯದ ಬೆಂಬಲ ಆರೋಗ್ಯಕರ ಜೀವನಕ್ಕೆ ಮಹತ್ವದ್ದಾಗಿವೆ. ಐಐಎಸ್‌ಸಿ ಸಹಯೋಗವು ಈ ಅಂಶಗಳ ಕುರಿತು ವೈಜ್ಞಾನಿಕವಾಗಿ ಅಧ್ಯಯನ ನಡೆಸಲು ಅಗತ್ಯವಾದ ನಿಖರತೆಯನ್ನು ಒದಗಿಸಲಿದೆ ಎಂದರು.
ಐಐಎಸ್‌ಸಿಯ ಡೆವಲಪ್‌ಮೆಂಟಲ್ ಬಯಾಲಜಿ ಮತ್ತು ಜೆನೆಟಿಕ್ಸ್ ವಿಭಾಗದ ಪ್ರೊ. ದೀಪಕ್ ಸೈನಿ ಮಾತನಾಡಿ, ಈ ಸಹಯೋಗವು ಜನರ ಆರೋಗ್ಯದಲ್ಲಿ ಕಾಲಾನಂತರದಲ್ಲಿ ಉಂಟಾಗುವ ಬದಲಾವಣೆಗಳನ್ನು ವೈಜ್ಞಾನಿಕವಾಗಿ ಗುರುತಿಸಲು ಉತ್ತಮ ಅವಕಾಶ ಕಲ್ಪಿಸಿದೆ. ಅಧ್ಯಯನದ ಫಲಿತಾಂಶಗಳು ಸಾರ್ವಜನಿಕರು, ವೈದ್ಯಕೀಯ ವೃತ್ತಿಪರರು ಮತ್ತು ನೀತಿ ನಿರೂಪಕರು ಉತ್ತಮ ಆರೋಗ್ಯ ನಿರ್ಧಾರಗಳನ್ನು ಕೈಗೊಳ್ಳಲು ಸಹಕಾರಿಯಾಗಲಿವೆ ಎಂದು ತಿಳಿಸಿದರು.
ಭಾರತೀಯರು ದೀರ್ಘಕಾಲ ಆರೋಗ್ಯಕರವಾಗಿ ಬದುಕಲು ನೆರವಾಗುವ ಜೀವನಶೈಲಿ ಮತ್ತು ಪೋಷಣೆಯ ಅಂಶಗಳನ್ನು ವೈಜ್ಞಾನಿಕವಾಗಿ ಗುರುತಿಸುವುದು ಈ ಅಧ್ಯಯನದ ಪ್ರಮುಖ ಆಶಯವಾಗಿದೆ.
