ಬೆಂಗಳೂರು: ದೇಶದ ರಫ್ತು ಮತ್ತು ವಿದೇಶಿ ನೇರ ಹೂಡಿಕೆಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕಕ್ಕೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಬಂಡವಾಳ ಹರಿದುಬರುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರವು 38 ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿರುವುದರಿಂದ ರಾಜ್ಯದ ವಿವಿಧ ವಲಯಗಳ ಉತ್ಪನ್ನಗಳ ರಫ್ತಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಶುಕ್ರವಾರ ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ, ವಿಶ್ವೇಶ್ವರಯ್ಯ ರಫ್ತು ಉತ್ತೇಜನ ಸಂಸ್ಥೆ ಹಾಗೂ ಭಾರತೀಯ ರಫ್ತು ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಿದ್ದ ಮುಕ್ತ ವ್ಯಾಪಾರ ಒಪ್ಪಂದಗಳ ಪ್ರಯೋಜನ ಕುರಿತ ರಾಜ್ಯಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದೇಶಿ ಹೂಡಿಕೆಯಲ್ಲಿ ಕರ್ನಾಟಕಕ್ಕೆ ದೇಶದಲ್ಲೇ ಎರಡನೇ ಸ್ಥಾನ
ಕಳೆದ ಹಣಕಾಸು ವರ್ಷದಲ್ಲಿ ಕರ್ನಾಟಕಕ್ಕೆ 12,939 ಮಿಲಿಯನ್ ಡಾಲರ್ ವಿದೇಶಿ ನೇರ ಹೂಡಿಕೆ ಹರಿದುಬಂದಿದ್ದು, ದೇಶದಲ್ಲಿ ರಾಜ್ಯವು ಎರಡನೇ ಸ್ಥಾನದಲ್ಲಿದೆ ಎಂದು ಸಚಿವರು ತಿಳಿಸಿದರು.
ಕೇಂದ್ರ ಸರ್ಕಾರವು ಇತ್ತೀಚೆಗೆ ಸಂಯುಕ್ತ ಅರಬ್ ಸಂಸ್ಥಾನ, ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್‌ಡಮ್, ಓಮಾನ್, ಯುರೋಪಿಯನ್ ಒಕ್ಕೂಟ ಹಾಗೂ ನ್ಯೂಜಿಲೆಂಡ್ ಸೇರಿದಂತೆ ಒಟ್ಟು 38 ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಅಮೆರಿಕದೊಂದಿಗೂ ಇಂತಹ ಒಪ್ಪಂದ ಶೀಘ್ರದಲ್ಲೇ ಅಂತಿಮಗೊಳ್ಳುವ ನಿರೀಕ್ಷೆಯಿದೆ ಎಂದರು.
ಹಲವು ವಲಯಗಳ ರಫ್ತಿಗೆ ಜಾಗತಿಕ ಮಾರುಕಟ್ಟೆ ಅವಕಾಶ
ಈ ಒಪ್ಪಂದಗಳಿಂದ ದೇಶದ ಜಿಡಿಪಿ ವೃದ್ಧಿಗೆ ವೇಗ ಸಿಗುವುದರ ಜತೆಗೆ ಕರ್ನಾಟಕದ ಎಲೆಕ್ಟ್ರಾನಿಕ್ಸ್, ವಿದ್ಯುತ್ ಉತ್ಪನ್ನಗಳು, ಕೃಷಿ ಮತ್ತು ಆಹಾರೋತ್ಪನ್ನಗಳು, ಜವಳಿ, ಸಿದ್ಧ ಉಡುಪು, ಸಾಗರೋತ್ಪನ್ನಗಳು, ಎಂಜಿನಿಯರಿಂಗ್ ಉಪಕರಣಗಳು, ಔಷಧ ಹಾಗೂ ಸಸ್ಯಾಧಾರಿತ ಉತ್ಪನ್ನಗಳ ರಫ್ತಿಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ ಎಂದು ಹೇಳಿದರು.
ಕೈಗಾರಿಕಾ ಸ್ನೇಹಿ ನೀತಿಗಳಲ್ಲಿ ಕರ್ನಾಟಕ ಮುಂಚೂಣಿ
ಐಟಿ, ಬಿಟಿ, ಸ್ಟಾರ್ಟ್‌ಅಪ್, ಏರೋಸ್ಪೇಸ್, ಎಲೆಕ್ಟ್ರಿಕ್ ವಾಹನ, ಜವಳಿ, ಹಸಿರು ಇಂಧನ ಮತ್ತು ಸೆಮಿಕಂಡಕ್ಟರ್ ಕ್ಷೇತ್ರಗಳಿಗೆ ರಾಜ್ಯ ಸರ್ಕಾರ ಪರಿಣಾಮಕಾರಿ ಕೈಗಾರಿಕಾ ನೀತಿಗಳನ್ನು ರೂಪಿಸಿದೆ. ಸರಕು ರಫ್ತಿನಲ್ಲಿ ಕರ್ನಾಟಕ ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಹೂಡಿಕೆ ಒಪ್ಪಂದಗಳನ್ನು ಕಾರ್ಯರೂಪಕ್ಕೆ ತರುವಲ್ಲಿಯೂ ರಾಜ್ಯ ಮುಂಚೂಣಿಯಲ್ಲಿದೆ ಎಂದು ವಿವರಿಸಿದರು.
ದೇಶದ ಒಟ್ಟು ಸಾಫ್ಟ್‌ವೇರ್ ಸಂಬಂಧಿತ ಸೇವೆಗಳ ರಫ್ತಿನಲ್ಲಿ ಕರ್ನಾಟಕದ ಪಾಲು ಶೇ.40ರಷ್ಟಿದೆ. ಫಾಕ್ಸ್‌ಕಾನ್, ಲ್ಯಾಮ್ ರಿಸರ್ಚ್, ಅಪ್ಲೈಡ್ ಮೆಟೀರಿಯಲ್ಸ್ ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್‌ನಂತಹ ಜಾಗತಿಕ ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡಿವೆ. ಇದರಿಂದ ಸ್ಥಳೀಯ ಪೂರೈಕೆದಾರರಿಗೂ ಹೆಚ್ಚಿನ ಉದ್ಯಮಾವಕಾಶಗಳು ಸೃಷ್ಟಿಯಾಗಿವೆ ಎಂದರು.
ಮುಕ್ತ ವ್ಯಾಪಾರ ಒಪ್ಪಂದಗಳ ಪ್ರಯೋಜನ ಪಡೆದುಕೊಂಡು ರಾಜ್ಯದ ಉದ್ಯಮಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತಮ್ಮ ಸ್ಥಾನವನ್ನು ಬಲಪಡಿಸಿಕೊಳ್ಳಬೇಕು. ಇದರಿಂದ ಕರ್ನಾಟಕದ ಆರ್ಥಿಕ ಗುರಿಗಳನ್ನು ಸಾಧಿಸಲು ಸಾಧ್ಯವಾಗಲಿದೆ ಎಂದು ಎಂ.ಬಿ. ಪಾಟೀಲ್ ಕರೆ ನೀಡಿದರು.
