ಬೆಂಗಳೂರು: ಕೇಂದ್ರ ಸರ್ಕಾರದ ಉತ್ಪಾದನೆ ಆಧಾರಿತ ಪ್ರೋತ್ಸಾಹಕ (PLI) ಯೋಜನೆಯಡಿ ಜವಳಿ ಕ್ಷೇತ್ರದಲ್ಲಿ ಹೂಡಿಕೆ ಆಕರ್ಷಣೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನ ಪಡೆದಿದೆ ಎಂದು ಸಕ್ಕರೆ ಮತ್ತು ಜವಳಿ ಸಚಿವ ರುದ್ರಪ್ಪ ಲಮಾಣಿ ತಿಳಿಸಿದ್ದಾರೆ.
ಕೇಂದ್ರ ಜವಳಿ ಸಚಿವಾಲಯವು ಲೋಕಸಭೆಯಲ್ಲಿ ನೀಡಿರುವ ಮಾಹಿತಿಯ ಪ್ರಕಾರ, 2026ರ ಮಾರ್ಚ್ 31ರವರೆಗೆ ಪಿಎಲ್‌ಐ ಯೋಜನೆಯಡಿ ಕರ್ನಾಟಕದ ಆರು ಕಂಪನಿಗಳ ಮೂಲಕ ₹1,515.99 ಕೋಟಿ ಹೂಡಿಕೆಯಾಗಿದ್ದು, ಒಟ್ಟು 5,611 ಉದ್ಯೋಗಗಳು ಸೃಷ್ಟಿಯಾಗಿವೆ. ರಾಜ್ಯದ ಜವಳಿ ಕ್ಷೇತ್ರದ ಈ ಸಾಧನೆಯು ಕೈಗಾರಿಕಾ ಸಾಮರ್ಥ್ಯ ಹಾಗೂ ಹೂಡಿಕೆದಾರರ ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಕೇಂದ್ರ ಸರ್ಕಾರವು ಜವಳಿ ಉದ್ಯಮಗಳಿಗೆ ಪಿಎಲ್‌ಐ ಯೋಜನೆಯಡಿ ಅರ್ಹತಾ ನಿಯಮಗಳನ್ನು ಸಡಿಲಿಸಿ, ಯೋಜನೆಯ ಅವಧಿಯನ್ನು ವಿಸ್ತರಿಸಿರುವುದನ್ನು ಸ್ವಾಗತಿಸಿದ ಸಚಿವರು, ಇದರಿಂದ ರಾಜ್ಯದ ಜವಳಿ ಮತ್ತು ಸಿದ್ಧ ಉಡುಪು ತಯಾರಿಕಾ ವಲಯಕ್ಕೆ ಮತ್ತಷ್ಟು ಉತ್ತೇಜನ ದೊರೆಯಲಿದೆ ಎಂದರು. ಪರಿಷ್ಕೃತ ಯೋಜನೆಯ ಪ್ರಯೋಜನವನ್ನು ರಾಜ್ಯದ ಅರ್ಹ ಉದ್ಯಮಗಳಿಗೆ ತಲುಪಿಸಲು ಕೈಮಗ್ಗ ಮತ್ತು ಜವಳಿ ಇಲಾಖೆಯ ಮೂಲಕ ವಿಶೇಷ ನೆರವು ಅಭಿಯಾನ ಆರಂಭಿಸಲಾಗುವುದು ಎಂದು ತಿಳಿಸಿದರು.
ಪಿಎಲ್‌ಐ ಯೋಜನೆಯಲ್ಲಿ ಮಹತ್ವದ ಬದಲಾವಣೆ
ಕೇಂದ್ರ ಜವಳಿ ಸಚಿವಾಲಯವು ಪಿಎಲ್‌ಐ ಯೋಜನೆಯ ಎರಡನೇ ವಿಭಾಗದಲ್ಲಿ ಕನಿಷ್ಠ ವಹಿವಾಟಿನ ಮಿತಿಯನ್ನು ₹200 ಕೋಟಿಯಿಂದ ₹100 ಕೋಟಿಗೆ ಇಳಿಸಿದೆ. ನಾಲ್ಕನೇ ಸುತ್ತಿನಲ್ಲಿ ಅನುಮೋದನೆ ಪಡೆಯುವ ಕಂಪನಿಗಳಿಗೆ ಯೋಜನೆಯ ಅವಧಿಯನ್ನು 2033–34ನೇ ಹಣಕಾಸು ವರ್ಷದವರೆಗೆ ವಿಸ್ತರಿಸಲಾಗಿದೆ.
ಮಾನವ ನಿರ್ಮಿತ ನಾರಿನ ಸಿದ್ಧ ಉಡುಪುಗಳು (MMF Apparel), ಬಟ್ಟೆಗಳು (MMF Fabrics) ಹಾಗೂ ತಾಂತ್ರಿಕ ಜವಳಿ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿರುವ ಅರ್ಹ ಉದ್ಯಮಗಳು ನವೆಂಬರ್ 1ರಿಂದ ಡಿಸೆಂಬರ್ 31ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಅವಕಾಶವನ್ನು ರಾಜ್ಯದ ಉದ್ಯಮಗಳು ಸದುಪಯೋಗಪಡಿಸಿಕೊಳ್ಳುವಂತೆ ಮಾರ್ಗದರ್ಶನ ನೀಡಲಾಗುವುದು ಎಂದು ಸಚಿವರು ಹೇಳಿದರು.
ಪರಿಷ್ಕೃತ ಮಾರ್ಗಸೂಚಿಗಳ ಕುರಿತು ಉದ್ಯಮಗಳಲ್ಲಿ ಅರಿವು ಮೂಡಿಸುವುದು, ಅರ್ಹ ಕೈಗಾರಿಕೆಗಳನ್ನು ಗುರುತಿಸುವುದು ಹಾಗೂ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ನೆರವು ನೀಡುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಇದರಿಂದ ಹೆಚ್ಚಿನ ಉದ್ಯಮಗಳು ಕೇಂದ್ರ ಸರ್ಕಾರದ ಪ್ರೋತ್ಸಾಹಕ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಾಗಲಿದೆ.
ರಾಜ್ಯದ ನೂತನ ಜವಳಿ ನೀತಿಗೆ ಪೂರಕ
ರಾಜ್ಯ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಕರ್ನಾಟಕ ಜವಳಿ ಮತ್ತು ಸಿದ್ಧ ಉಡುಪು ನೀತಿ 2026–31ಕ್ಕೂ ಈ ಉಪಕ್ರಮ ಪೂರಕವಾಗಲಿದೆ. ಈ ನೀತಿಯಡಿ ಐದು ವರ್ಷಗಳಲ್ಲಿ ₹20,000 ಕೋಟಿ ಹೂಡಿಕೆ ಆಕರ್ಷಿಸುವುದರ ಜೊತೆಗೆ ಐದು ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ₹4,000 ಕೋಟಿ ಅನುದಾನ ಒದಗಿಸುವ ಉದ್ದೇಶವಿದೆ.
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಪ್ರಯೋಜನಗಳನ್ನು ಉದ್ಯಮಿಗಳಿಗೆ ತಲುಪಿಸುವ ಮೂಲಕ ಜವಳಿ ಕ್ಷೇತ್ರದ ಬೆಳವಣಿಗೆಗೆ ಆದ್ಯತೆ ನೀಡಲಾಗುವುದು ಎಂದರು.
ಕೈಗಾರಿಕಾ ಸಂಘಟನೆಗಳು ಹಾಗೂ ಉದ್ಯಮಿಗಳೊಂದಿಗೆ ಸಮನ್ವಯ ಸಾಧಿಸಿ, ಅರ್ಜಿ ಸಲ್ಲಿಕೆಗೆ ಮಾರ್ಗದರ್ಶನ ನೀಡುವುದರ ಜೊತೆಗೆ ಪ್ರಕ್ರಿಯಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ನೆರವಾಗಲಾಗುವುದು. ಕೇಂದ್ರದ ಪಿಎಲ್‌ಐ ಯೋಜನೆ ಮತ್ತು ರಾಜ್ಯದ ನೂತನ ಜವಳಿ ನೀತಿಯ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಹೂಡಿಕೆ ಆಕರ್ಷಣೆ, ಉತ್ಪಾದನಾ ಸಾಮರ್ಥ್ಯದ ವಿಸ್ತರಣೆ ಹಾಗೂ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗುವುದು ಎಂದು ಅವರು ತಿಳಿಸಿದರು.
