ಶಹಾಪುರ: ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಕಾಣಬೇಕೆಂದರೆ ಶಿಕ್ಷಣ ಜೊತೆಗೆ ಬೌಧ್ದಿಕವಾಗಿ ಸದೃಢರಾಗಬೇಕು ಹಾಗೂ ನಾಡು, ನುಡಿ ಸಂಸ್ಕೃತಿ ಉಳಿಸಿಕೊಳ್ಳುವುದರೊಂದಿಗೆ ಕನ್ನಡ ತಾಯಿಗೆ ಗೌರವ ನೀಡುವಂತಾಗಬೇಕು ಎಂದು ಹಿರಿಯ ಸಾಹಿತಿ ಸಿದ್ಧರಾಮ ಹೊನ್ಕಲ್ ಹೇಳಿದರು.
ನಗರದ ವಿಶ್ವಜ್ಯೋತಿ ಕಾಲೇಜಿನಲ್ಲಿ ಚಿರಂಜೀವಿ ಸಾಂಸ್ಕೃತಿಕ ಸಾಮಾಜಿಕ ಕಲಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜು, ಶಾಲಾ ಆವರಣದೊಳಗೆ ಪ್ರವೇಶಿಸುತಿದ್ದಂತೆ ಕನ್ನಡ ಭಾಷೆ ಬಳಸುವ ಮೂಲಕ ಬಾಷೆಯ ಉಳಿವಿಗಾಗಿ ಪೌಢಮಟ್ಟದಲ್ಲಿಯೇ ಪಣತೊಡಬೇಕು. ಸಾಹಿತಿಗಳು ನೀಡಿದ ಸಾಹಿತ್ಯ ಕೊಡುಗೆ ಭಾಷೆಯನ್ನು ಮತ್ತಷ್ಟು ಭದ್ರತೆಗೊಳಿಸಿದೆ. ಅಲ್ಲದೇ ಎರಡು ಸಾವಿರ ವರ್ಷಕ್ಕಿಂತಲೂ ಹೆಚ್ಚು ಇತಿಹಾಸ ಹೊಂದಿರುವ ಕನ್ನಡದ ಹಿರಿಮೆಯನ್ನು ಇಂದಿಗೂ ಕಾಪಾಡಿಕೊಂಡು ಬಂದಿದೆ ಎಂದರು.
ಯುವ ಉದ್ಯಮಿದಾರ ಗುರು ಮಣಿಕಂಠ ಮಾತನಾಡಿ ಗುರಿ ತಲುಪುವ ವರೆಗೆ ಗುರುವಿನ ಸಲಹೆ, ಮಾರ್ಗದರ್ಶನ ಮುಖ್ಯ. ನನ್ನದು ಹುಟ್ಟುರು ಬಳ್ಳಾರಿಯಾಗಿದ್ದು ಪ್ರತಿ ವರ್ಷ ಏನೆ ಕೆಲಸವಿದ್ದರೂ ಶಿಕ್ಷಕರ ದಿನದಂದು ನನ್ನ ಗುರುವನ್ನು ಬೇಟಿ ಮಾಡಿ ಆರ್ಶಿರ್ವಾದ ಪಡೆಯುತ್ತೇನೆ. ಎಷ್ಟೋ ಸಲ ನಮ್ಮಲ್ಲಿ ಅನೇಕರಿಗೆ ಎಲ್ಲಾ ರೀತಿಯ ಸಕಲ ಸೌಲಭ್ಯಗಳು ಲಭ್ಯವಿದ್ದರೂ ಸಹ ಯಶಸ್ಸಿನ ದಾರಿ ಸಿಗಲ್ಲಾ. ಮನುಷ್ಯನಿಗೆ ಶ್ರಮ ಮುಖ್ಯ. ನಾನು ಸಹ ಯಾವುದೇ ಸೌಲಭ್ಯಗಳು ಇಲ್ಲದಿದ್ದರೂ ಬಡತನದಲ್ಲಿ ಹುಟ್ಟಿ ಕಠಿಣ ಪರಿಶ್ರಮ ಮತ್ತು ಛಲದಿಂದ ಯಶಸ್ಸಿನ ಶಿಖರವನ್ನು ಹಂತ ಹಂತವಾಗಿ ಹತ್ತಿಕೊಂಡು ಬಂದಿದ್ದೇನೆ ಇದೀಗ ಉದ್ಯಮಿಯಾಗಿ ಹತ್ತಾರು ಕಾರ್ಮಿಕರಿಗೆ ಕೆಲಸ ನೀಡಿ ಸಾರ್ಥಕ ಜೀವನ ನಡೆಸುತ್ತಿದ್ದೇನೆ ಆದ್ದರಿಂದ ವಿದ್ಯಾರ್ಥಿಗಳಲ್ಲಿ ಶ್ರಮ ಮುಖ್ಯ ಎಂದರು.
ನಮ್ಮ ಕರ್ನಾಟಕ ಸೇನೆಯ ರಾಜ್ಯ ಪ್ರಧಾನ ಸಂಚಾಲಕ ಭೀಮಣ್ಣ ಶಖಾಪುರ ಮಾತನಾಡಿ ನಮ್ಮ ಹಿರಿಯರು ನಡೆದು ಬಂದ ದಾರಿ ಜನಪದ. ಆ ಜನಪದದ ಜಾಡನ್ನು ಮರೆತರೆ ಬದುಕಿನ ಹಾದಿ ತಪ್ಪುತ್ತದೆ. ಜಗತ್ತು ಇದ್ದಂತೆ ಇರದು, ಬದಲಾಗುತ್ತಿರುವ ಕಾಲಘಟ್ಟದಲ್ಲಿ ಹಿಂದಿನ ಬೇರು ಮರೆತರೆ ಮುಂದಿನ ದಿನಗಳು ಸಂತಸದಾಯಕವಾಗಿರಲಾರದು. ತಂತ್ರಜ್ಞಾನ ಯುಗದಲ್ಲಿ ಸಂಸ್ಕೃತಿ ಮತ್ತು ಜನಪದ ಕಲೆಯನ್ನು ಮೂಲೆಗುಂಪಾಗಿಸದೇ ಅದನ್ನು ಉಳಿಸಿ ಬೆಳೆಸುವ ಕಾರ್ಯ ನಿತ್ಯ ನಡೆದಾಗ ಮಾತ್ರ ಜನಪದ ಉಳಿಯುತ್ತದೆ ಎಂದರು.
ಚಿರಂಜೀವಿ ಸಾಂಸ್ಕೃತಿಕ ಸಾಮಾಜಿಕ ಕಲಾ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಬೊನೇರ ಕಾರ್ಯಕ್ರಮ ನೇತೃತ್ವ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕುಮಾರಿ ವಿನುತಾ ಭರತನಾಟ್ಯ ಪ್ರಸ್ತುತಪಡಿಸಿದರು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾ ಉಪಾಧ್ಯಕ್ಷ ಈರಣ್ಣ ಮೌರ್ಯ, ಕಾಲೇಜಿನ ಪ್ರಾಂಶುಪಾಲರಾದ ತಬೀತಾ, ಮಲ್ಲಯ್ಯ ಸ್ವಾಮಿ ಇಟಗಿ, ಶರಣು ಕಾಡಂಗೇರ, ಮಾಳಪ್ಪ ಕುನ್ನೂರ ಸೇರಿದಂತೆ ಸಿಬ್ಬಂದಿಗಳು, ವಿದ್ಯಾರ್ಥಿಗಳು ಇದ್ದರು.
