ಶಹಾಪುರ: ಎಸ್ಐಆರ್ ನಿಲ್ಲಿಸದಿದ್ದರೆ ಪ್ರಜಾಪ್ರಭುತ್ವಕ್ಕೆ ಉಳಿವಿಲ್ಲ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಅವೈಜ್ಞಾನಿಕ. ಬೆಂಗಾಲ ರಾಜ್ಯದಲ್ಲಿ ನಡೆದ ಹುನ್ನಾರ, ಕರ್ನಾಟಕದಲ್ಲಿ ನಡೆಯಬಾರದು. ರಾಜ್ಯದಲ್ಲಿ ಮುಂದಿನ 2 ವರ್ಷ ಯಾವುದೇ ಚುನಾವಣೆ ಇಲ್ಲದಿದ್ದರು ಇಷ್ಟೊಂದು ಅವಸರದಲ್ಲಿ ಪರಿಷ್ಕರಣೆ ಮಾಡುತ್ತಿರುವುದೆಕೆ. ದಲಿತರು, ಹಿಂದುಳಿದವರು ಮತಗಳನ್ನು ಗುರಿಯಾಗಿಸಿ ಮತದಾನ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಆರೋಪಿಸಿದರು.
ಎಸ್ಐಆರ್ ಪ್ರಕ್ರಿಯೆಯಲ್ಲಿನ ಲೋಪದೋಷ ಸರಿಪಡಿಸಿ ನೈಜ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ನಟ ಪ್ರಕಾಶ್ ರಾಜ್ ಅವರು ರಾಜ್ಯದ 100 ಆಯ್ದ ಮತಗಟ್ಟೆಗಳಲ್ಲಿ ಎಸ್ಐಆರ್ ಪರಿಶೋಧ ಹಾಗೂ ಪ್ರತಿರೋಧ ಪ್ರವಾಸ ಕೈಗೊಂಡಿದ್ದು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಐಆರ್ ಪ್ರಕ್ರಿಯೆಯಲ್ಲಿ ನಡೆದಿರುವ ಲೋಪದೋಷಗಳನ್ನು ಸರಿಪಡಿಸಲು ಕರಡು ಮತದಾರರ ಪಟ್ಟಿಯಲ್ಲಿ ತಿದ್ದುಪಡಿಗೆ ಸಮರ್ಪಕ ಅವಕಾಶ ನೀಡಬೇಕು. ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡಬಾರದು. ನೋಟಿಸ್ ಪಡೆದಿರುವ ಮತದಾರರಿಗೆ ತಮ್ಮ ಹಕ್ಕು ಸಮರ್ಥಿಸಿಕೊಳ್ಳಲು ಅವಕಾಶ ಕಲ್ಪಿಸಿ ಮತದಾನದ ಹಕ್ಕನ್ನು ಖಚಿತಪಡಿಸಬೇಕು.
ಆಳುವ ಪಕ್ಷ, ವಿರೋಧ ಪಕ್ಷ, ಸುಪ್ರೀಂಕೋರ್ಟ್ನ ಜರ್ಡ್ಜ್ಗಳು ಚುನಾವಣೆ ಆಯೋಗವನ್ನು ರಚಿಸಲಿದೆ. ಆದರೆ ಇಲ್ಲಿ ಸರ್ವಾಧಿಕಾರದ ಮೇಲೆ ಎಸ್ಐಆರ್ ಪ್ರಕ್ರಿಯೇ ನಡೆದಿದೆ. ಈಗಾಗಲೇ ಸುಮಾರು 5.21.957 ಮತಗಳನ್ನು ತೆಗೆದುಹಾಕಲಾಗಿದೆ.
ಮತದಾರ ಸ್ಥಳಾಂತರಗೊಂಡವರಿಗೆ ವಿಳಾಸ ಬದಲಾವಣೆ ಮಾಡಲು ಫಾರಂ. ನಂ8 ಕೊಡಬೇಕು. ಅದನ್ನು ಬಿಟ್ಟು ಹೆಸರನ್ನೇ ಡಿಲೀಟ್ ಮಾಡಿ ಮತ್ತೆ ಹೊಸದಾಗಿ ಫಾರಂ ನಂ 6 ತುಂಬಲು ಹೇಳುವುದು ಯಾವ ನ್ಯಾಯ. ಯಾದಗಿರಿ ಜಿಲ್ಲೆಯಲ್ಲಿ ವರ್ಷಕ್ಕೆ ಸಾವಿರಾರು ಸಂಖ್ಯೆಯ ಜನರು ದುಡಿಯಲು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಾರೆ ಅದು ಅಪರಾಧವೇ. ಕೇವಲ ದುಡಿಯಲು ಹೋದವರ ಹೆಸರನ್ನು ಪಟ್ಟಿಯಿಂದ ಡಿಲೀಟ್ ಮಾಡುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್ಐಆರ್ ಒಂದು ಪಿತೂರಿ
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು/ ಎಸ್ಐಆರ್ ಒಂದು ಪಿತೂರಿ, ಹಗರಣ ಹಾಗೂ ಅಸಂವಿಧಾನಿಕ ಪ್ರಕ್ರಿಯೇಯಾಗಿದೆ. ರಾಜ್ಯದ ಆಯ್ದ 100 ಮತಗಟ್ಟೆಗಳಲ್ಲಿ ಜನಪರ ಸಂಘಟನೆಯ ವಿವಿಧ ಪ್ರತಿನಿಧಿಗಳೊಂದಿಗೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಬೇಟಿ ನೀಡಲಾಗುವುದು. ಸಂಕಷ್ಟದಲ್ಲಿರುವ ಜನರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿ, ಚುನಾವಣಾ ಆಯೋಗವು ದೇಶದ ನಾಗರಿಕರಿಗೆ ಉಂಟು ಮಾಡುತ್ತಿರುವ ಸಂಕಷ್ಟ ಮತ್ತು ದುರಪಯೋಗ ಎತ್ತಿ ತೋರಿಸಲಾಗುವುದು ಎಂದು ಪ್ರಕಾಶ್ ರಾಜ್ ಹೇಳಿದರು.
ಈ ಸಂದರ್ಭದಲ್ಲಿ ಕೆ.ಎಲ್ ಅಶೋಕ, ಲಕ್ಷ್ಮಣ ಮಂಡಲಗೇರ, ಆರ್.ಚೆನ್ನಬಸ್ಸು, ಗಿರೆಪ್ಪಗೌಡ ಬಾಣತಿಹಾಳ, ಚೆನ್ನಪ್ಪ ಆನೇಗುಂದಿ, ಮಲ್ಲಿಕಾರ್ಜುನ ಸತ್ಯಂಪೇಠ, ಮಲ್ಲಿಕಾರ್ಜುನ ಪೂಜಾರಿ, ಶ್ರೀಶೈಲ ಹೊಸ್ಮನಿ, ಮಾಯಾ, ಖಾಲೀದ್, ಮರೆಪ್ಪ ಪ್ಯಾಟಿ, ನಾಗಣ್ಣ ಬಡಿಗೇರ, ಶಿವಕುಮಾರ ತಳವಾರ, ಶಿವಪುತ್ರ ಜವಳಿ, ಎಸ್.ಎಂ ಸಾಗರ, ಶರಣು ಸಗರ, ವಿಶ್ವ ನಾಟೇಕರ ಸೇರಿದಂತೆ ಮಹಿಳೆಯರು, ವಿವಿಧ ಸಮಾಜದ ಮುಖಂಡರು ಇದ್ದರು.
