ಬೆಂಗಳೂರು: ಘನತ್ಯಾಜ್ಯ ನಿರ್ವಹಣಾ ನಿಯಮ ಉಲ್ಲಂಘನೆ ಹಾಗೂ ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ಬಳಕೆಯ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಅಧಿಕಾರಿಗಳು ನಗರದ ಎರಡು ಪ್ರತಿಷ್ಠಿತ ವಾಣಿಜ್ಯ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಂಡಿದ್ದು, ಒಟ್ಟು ₹1.25 ಲಕ್ಷ ದಂಡ ವಿಧಿಸಿ ವಸೂಲಿ ಮಾಡಿದ್ದಾರೆ.
ಬಿಟಿಎಂ ವಿಧಾನಸಭಾ ಕ್ಷೇತ್ರದ ಲಕ್ಕಸಂದ್ರ ವಾರ್ಡ್ ವ್ಯಾಪ್ತಿಯ ಹೊಸೂರು ಮುಖ್ಯ ರಸ್ತೆಯಲ್ಲಿರುವ **ಪಿವಿಆರ್ ಸಿನಿಮಾಸ್ (PVR INOX Limited)**ನಲ್ಲಿ ಪಾಲಿಕೆ ಅಧಿಕಾರಿಗಳ ತಂಡ ತ್ಯಾಜ್ಯ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿತು. ಈ ವೇಳೆ ಹಸಿ ಮತ್ತು ಒಣ ಕಸವನ್ನು ಮೂಲದಲ್ಲೇ ಸಮರ್ಪಕವಾಗಿ ವಿಂಗಡಿಸದೆ ಮಿಶ್ರಣ ಮಾಡಿರುವುದು ಹಾಗೂ ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ಬಳಸುತ್ತಿರುವುದು ಪತ್ತೆಯಾಗಿದೆ.
ಪಿವಿಆರ್ ಸಿನಿಮಾಸ್‌ಗೆ ₹75 ಸಾವಿರ ದಂಡ
ಘನತ್ಯಾಜ್ಯ ನಿರ್ವಹಣಾ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಪಿವಿಆರ್ ಸಿನಿಮಾಸ್‌ಗೆ ಒಟ್ಟು ₹75,000 ದಂಡ ವಿಧಿಸಿ ವಸೂಲಿ ಮಾಡಲಾಗಿದೆ.
ಇದರಲ್ಲಿ ಮೂಲದಲ್ಲೇ ಕಸವನ್ನು ವಿಂಗಡಿಸದೆ ಮಿಶ್ರಣ ಮಾಡಿದ್ದಕ್ಕಾಗಿ ₹50,000 ಹಾಗೂ ನಿಷೇಧಿತ ಏಕಬಳಕೆಯ ಪ್ಲಾಸ್ಟಿಕ್ ಬಳಕೆಗೆ ₹25,000 ದಂಡ ವಿಧಿಸಲಾಗಿದೆ.
ಫೋರಂ ಮಾಲ್‌ಗೆ ಸೇರಿದ STP ತ್ಯಾಜ್ಯ: ₹50,839 ದಂಡ
ಇನ್ನೊಂದೆಡೆ, ಉತ್ತರಹಳ್ಳಿ–ಕನಕಪುರ ಮುಖ್ಯ ರಸ್ತೆಯ ಜಯನಗರ ಹೌಸಿಂಗ್ ಸೊಸೈಟಿ ಬಡಾವಣೆಯ ಶಾಪ್‌ವೆಲ್ ಸೂಪರ್ ಮಾರ್ಕೆಟ್ ಸಮೀಪ ಒಳಚರಂಡಿ ಸಂಸ್ಕರಣಾ ಘಟಕದ (STP) ತ್ಯಾಜ್ಯ ಸುರಿದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.
ಸ್ಥಳೀಯರಿಂದ ಬಂದ ಮಾಹಿತಿ ಆಧರಿಸಿ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಈ ತ್ಯಾಜ್ಯವು ಫೋರಂ ಮಾಲ್‌ಗೆ ಸೇರಿದ್ದಾಗಿದೆ ಎಂದು ಮಾಲ್ ಸಿಬ್ಬಂದಿ ಒಪ್ಪಿಕೊಂಡ ಹಿನ್ನೆಲೆಯಲ್ಲಿ ₹50,839 ದಂಡ ವಿಧಿಸಿ ವಸೂಲಿ ಮಾಡಲಾಗಿದೆ.
