ಬೆಂಗಳೂರು: ಆರ್ಟ್ ಕಲ್ಚರಲ್ ಎಜುಕೇಷನಲ್ ಎನ್ಲೈಟ್ ಫೌಂಡೇಶನ್ (ರಿ) ಸಂಸ್ಥಾಪಕಿ ಅಂಬಿಕಾ ಸಿ. ಹಾಗೂ ಸಂಸ್ಥೆಯ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ, ಶಿಕ್ಷಕರ ದಿನಾಚರಣೆ ಹಾಗೂ “ಇಂಡಿಯಾ ರೆಕಾರ್ಡ್ಸ್” ವಿಶ್ವ ದಾಖಲೆ ಪ್ರಶಸ್ತಿ ಪತ್ರ ಪ್ರದಾನ ಸಮಾರಂಭವನ್ನು ಸೆಪ್ಟೆಂಬರ್ 6, 2026ರಂದು ಬೆಂಗಳೂರಿನ ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದ ರಂಗಸ್ಥಳ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಬ್ಬನ್ ಪಾರ್ಕ್, ಬೆಂಗಳೂರಿನ ಉಪ ನಿರ್ದೇಶಕರಾದ ಶ್ರೀಮತಿ ಜಿ. ಕುಸುಮಾ, ಹಿರಿಯ ಪತ್ರಕರ್ತರಾದ ಶ್ರೀ ಪ್ರಸನ್ನ, ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ರೋಶನಿ ಗೌಡ ಅವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಮಾರಂಭದಲ್ಲಿ ಯೋಗ, ಕಲೆ, ಸಂಸ್ಕೃತಿ, ಶಿಕ್ಷಣ ಹಾಗೂ ದೈಹಿಕ ಮತ್ತು ಮಾನಸಿಕ ಆರೋಗ್ಯ ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಶಿಕ್ಷಕರನ್ನು ಗುರುತಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗೋಪಾಲ್ ಆಚಾರ್, ಸರೋಜಾ ಗೋಪಾಲ್, ರೂಪಶ್ರೀ ಎನ್.ಆರ್., ಸುರೇಖಾ ರವಿಕುಮಾರ್, ಕಿಶೋರ್ ಕುಮಾರ್, ಗೋಪಿ ಡಿ., ಪುಷ್ಪಾ ಸಿ. ಹಾಗೂ ಅನ್ನಪೂರ್ಣಮ್ಮಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ಸಾಧಕರಿಗೆ “ಇಂಡಿಯಾ ರೆಕಾರ್ಡ್ಸ್” ವಿಶ್ವ ದಾಖಲೆ ಪ್ರಶಸ್ತಿ ಪತ್ರಗಳನ್ನು ಪ್ರದಾನ ಮಾಡಲಾಯಿತು.
ಶಿಕ್ಷಕರ ಸೇವೆ ಹಾಗೂ ಸಮಾಜದಲ್ಲಿ ಶಿಕ್ಷಣ, ಸಂಸ್ಕೃತಿ, ಕಲೆ ಮತ್ತು ಆರೋಗ್ಯದ ಅರಿವು ಮೂಡಿಸುವ ಕಾರ್ಯಗಳನ್ನು ಗುರುತಿಸಿ ಗೌರವಿಸುವುದು ಇಂತಹ ಕಾರ್ಯಕ್ರಮಗಳ ಪ್ರಮುಖ ಉದ್ದೇಶವಾಗಿದೆ. ಶಿಕ್ಷಕರ ದಿನಾಚರಣೆ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮವು ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸಾಧಕರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಮೂಲಕ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.
