ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕ ಹಾಗೂ ಸುಧಾರಣೆಗೊಳಿಸಲು ಜಿಪಿಎಸ್ ಪೈಲಟ್ ಟ್ರಾಕಿಂಗ್ ವ್ಯವಸ್ಥೆಗಳನ್ನು ಕಸ ಸಂಗ್ರಹಿಸುವ ಆಟೋಗಳಿಗೆ ಪ್ರಾಯೋಗಿಕವಾಗಿ ಅಳವಡಿಸುವ ಸಂಬಂಧ ಇಂದು ಹೆಚ್ ಎಸ್ ಆರ್ ಲೇಔಟ್ ನಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತರಾದ ಕೆ.ಎನ್. ರಮೇಶ್ ಹಾಗೂ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಸತೀಶ ರೆಡ್ಡಿ ರವರು ಚಾಲನೆ ನೀಡಿದರು.
208 ಆಟೋಗಳಿಗೆ ಜಿಪಿಎಸ್ ಅಳವಡಿಕೆಗೆ ಯೋಜನೆ
ಪಾಲಿಕೆ, BSWML, ಲೇಸ್ಟ್ ಬಿ ದಿ ಚೇಂಜ್ ಎನ್.ಜಿ.ಒ. ಹಾಗೂ ಇಂಟೆಲ್ (Intel) ಸಂಸ್ಥೆಯ ಜಂಟಿ ಸಹಯೋಗದಲ್ಲಿ ಕಸ ಸಂಗ್ರಹಣಾ ಆಟೋಗಳಿಗೆ ಜಿ.ಪಿ.ಎಸ್ ಟ್ರಾಕಿಂಗ್ ಅಳವಡಿಸುವ ಯೋಜನೆ ಬೊಮ್ಮನಹಳ್ಳಿಯಲ್ಲಿ ಜಾರಿಗೆ ತರಲಾಗಿರುತ್ತದೆ. ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಸುಮಾರು 208 ತ್ಯಾಜ್ಯ ಸಂಗ್ರಹಣಾ ವಾಹನಗಳಿದ್ದು, ಈ ಪೈಕಿ ಹೆಚ್.ಎಸ್.ಆರ್. ಲೇಔಟ್ ನ 36 ಆಟೋಗಳಿಗೆ ಪ್ರಾಯೋಗಿಕವಾಗಿ ಜಿ.ಪಿ.ಎಸ್. ಟ್ರ್ಯಾಕಿಂಗ್ ಅಳವಡಿಸಲಾಗಿದೆ.
ಪ್ರತಿದಿನ ಮಾನಿಟರಿಂಗ್ ಹಾಗೂ ರಿಯಲ್-ಟೈಮ್ ಟ್ರ್ಯಾಕಿಂಗ್
ಜಿಪಿಎಸ್ ಟ್ರಾಕಿಂಗ್ ಮೂಲಕ ಪ್ರತಿದಿನದ ಕಸ ನಿರ್ವಹಣೆ ಕುರಿತ ಮಾನಿಟರಿಂಗ್ ಕಾರ್ಯ ಹಾಗೂ ಆಟೋಗಳ ಚಲನ ವಲನ, ನಿಗದಿಪಡಿಸಿದ ರಸ್ತೆಗಳ ಸಂಚಾರ, ಸಮಯ, ಪ್ರಸ್ತುತ ಆಟೋ ನಿಂತರುವ ಸ್ಥಳ ಹಾಗೂ ಇನ್ನಿತರ ಮಾಹಿತಿಗಳನ್ನು ರಿಯಲ್-ಟೈಮ್ ಟ್ರ್ಯಾಕ್ ಮಾಡಲಾಗುತ್ತದೆ.
ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಮುಂದಿನ 8 ತಿಂಗಳ ಕಾಲ ಈ ಪೈಲಟ್ ಯೋಜನೆ ನಡೆಯಲಿದೆ. ಈ ಪ್ರಯೋಗ ಯಶಸ್ವಿಗೊಂಡಲ್ಲಿ ಪಾಲಿಕೆಯ ಇತರ ಭಾಗಗಳಿಗೂ ಇದನ್ನು ವಿಸ್ತರಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.
ಸೇವಕ್’ ತಂತ್ರಜ್ಞಾನ ಹಾಗೂ ಪಾಯಿಂಟ್ಸ್ ಸಿಸ್ಟಮ್
ಜಿಪಿಎಸ್ ಜೊತೆಗೆ ‘ಸೇವಕ್’ ತಂತ್ರಜ್ಞಾನವನ್ನು ಬಳಸಿ ಪ್ರತಿ ಮನೆಗಳಲ್ಲಿ ಕಸದ ತೂಕ ಹಾಗೂ ವಿಂಗಡಣೆಯನ್ನು ಮಾನಿಟರ್ ಮಾಡಲಾಗುತ್ತದೆ. ಸರಿಯಾಗಿ ಕಸ ವಿಂಗಡಿಸಿ ನೀಡುವ ಸಾರ್ವಜನಿಕರಿಗೆ 0 ಯಿಂದ 5 ಸ್ಟಾರ್ ರೇಟಿಂಗ್ ನೀಡಲಾಗುತ್ತದೆ. ಸತತವಾಗಿ ಕಸ ನೀಡದ ಮನೆಗಳನ್ನು ಸಿಸ್ಟಮ್ ಮೂಲಕ ಗುರುತಿಸಿ ದಂಡ ವಿಧಿಸಲು ಮಾರ್ಷಲ್ಸ್ಗಳಿಗೆ ಅಗತ್ಯ ಡೇಟಾವನ್ನು ಈ ತಂತ್ರಜ್ಞಾನದ ಮೂಲಕ ಒದಗಿಸಲಾಗುತ್ತದೆ.
ಸುಂದರ ನಗರ ನಿರ್ಮಿಸುವಲ್ಲಿ ಸಾರ್ವಜನಿಕರ ಪಾತ್ರ ಅವಶ್ಯ
ಮನೆಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ಮೂಲದಲ್ಲಿಯೇ ಹಸಿ ಹಾಗೂ ಒಣ ಕಸಗಳನ್ನು ವಿಂಗಡಿಸಿ ಆಟೋಗಳಿಗೆ ನೀಡುವುದರಿಂದ ಅರ್ಧದಷ್ಟು ಕಸದ ಸಮಸ್ಯೆ ನಿವಾರಣೆಯಾಗಲಿದೆ. ಹಾಗೂ ಕಸವನ್ನು ಎಲೆಂದರಲ್ಲಿ ಬಿಸಾಡುವುದುದನ್ನು ಸಾರ್ವಜನಿಕರು ತಡೆಗಟ್ಟುವುದು ಬಹು ಮುಖ್ಯ ಎಂದು ಆಯುಕ್ತರು ಅಭಿಪ್ರಾಯಪಟ್ಟರು. ಇದನ್ನೂ ಓದಿ: ನೆಕ್ಟ್ಸ್ ಲೆವೆಲ್ ಚಿತ್ರಕ್ಕೆ ಚಾಲನೆ
ಪೌರಕಾರ್ಮಿಕರ ಖಾಲಿ ಹುದ್ದೆಗಳನ್ನು ತುಂಬಲು ಕ್ರಮ ವಹಿಸಿ
ಈ ವೇಳೆ ಮಾತನಾಡಿದ ಶಾಸಕರಾದ ಸತೀಶ್ ರೆಡ್ಡಿ ರವರು, ಸಂಗ್ರಹಣೆಯಲ್ಲಿ ಪಾರದರ್ಶಕತೆ ತರಲು ಹಾಗೂ ಆರೋಪ-ಪ್ರತ್ಯಾರೋಪ ತಪ್ಪಿಸಲು ತಂತ್ರಜ್ಞಾನ ಬಳಕೆ ಅಗತ್ಯವಾಗಿದೆ ಎಂದರು. ಸೇವೆಯಿಂದ ಬಿಟ್ಟುಹೋಗಿರುವ ಅಥವಾ ಮೃತಪಟ್ಟಿರುವ ಪೌರಕಾರ್ಮಿಕರಿಂದ ಖಾಲಿ ಹುದ್ದೆಗಳಿಗೆ ತಕ್ಷಣದ ನೇಮಕ ಮಾಡುವಂತೆ ಆಯುಕ್ತರನ್ನು ಕೋರಿದರು.
ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ ವೀಕ್ಷಣೆ
ಕಾರ್ಯಕ್ರಮದ ನಂತರ ಶಾಸಕರು ಹಾಗೂ ಆಯುಕ್ತರು ಕ್ರೀಡಾಂಗಣದ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು ಹಾಗೂ ಶಾಸಕರ ಮನವಿ ಮೇರೆಗೆ ಹೊರಂಗಣ ಕ್ರೀಡಾಂಗಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟಲು ಸೂಕ್ತ ಭದ್ರತೆ ಒದಗಿಸುವಂತೆ ಅಧಿಕಾರಿಗಳಿಗೆ ಆಯುಕ್ತರು ಸೂಚನೆ ನೀಡಿದರು.
ಈ ವೇಳೆ ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತರಾದ ಶ್ರೀ ಸತೀಶ್ ಬಾಬು, ಇಂಟೆಲ್ ಸಂಸ್ಥೆಯ ಹಿರಿಯ ನಿರ್ದೇಶಕರಾದ ಮಾನಸ್, BSWML ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾದ ಶ್ರೀಮತಿ ರಮಾಮಣಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
