ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತರಾದ ಕೆ.ಎನ್. ರಮೇಶ್ ಅವರು ಇಂದು ಅಕ್ಷಯನಗರ ಹಾಗೂ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಪಾಲಿಕೆಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಸ್ಥಳೀಯ ಆರ್ಡಬ್ಲ್ಯೂಎ (RWA) ಪ್ರತಿನಿಧಿಗಳು ಹಾಗೂ ವಿವಿಧ ನಾಗರಿಕ ಸಮಸ್ಯೆಗಳನ್ನು ಆಲಿಸಿದರು.
ಅಕ್ಷಯನಗರ ಕೆರೆ ಮಾಲಿನ್ಯ ತಡೆ ಹಾಗೂ ಒತ್ತುವರಿ ತೆರವು
ಬೇಗೂರು-ಕೊಪ್ಪ ರಸ್ತೆಯಿಂದ ಹರಿದುಬರುವ ಕಲುಷಿತ ಒಳಚರಂಡಿ ನೀರು ಕೆರೆಗೆ ಸೇರದಂತೆ ತಡೆಯಲು BWSSB ಹಾಗೂ ಪಾಲಿಕೆಯ ಅಧಿಕಾರಿಗಳು ಜಂಟಿಯಾಗಿ ತಕ್ಷಣ ಕ್ರಮ ಕೈಗೊಳ್ಳಲು ಸೂಚಿಸಿದರು. ಸರ್ವೇ ನಂ. 334 ಸೇರಿದಂತೆ ಕೆರೆ ವ್ಯಾಪ್ತಿಯ ಒತ್ತುವರಿ ತೆರವುಗೊಳಿಸಲು ಹಾಗೂ ಕೆರೆ ಆವರಣದಲ್ಲಿರುವ ಹಾನಿಗೊಳಗಾದ ಆಟದ ಸಾಮಗ್ರಿ ಮತ್ತು ಜಿಮ್ ಉಪಕರಣಗಳನ್ನು ದುರಸ್ತಿಪಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಂಚಾರ ದಟ್ಟಣೆ ನಿಯಂತ್ರಣಕ್ಕೆ Odd-Even ಪಾರ್ಕಿಂಗ್ ವ್ಯವಸ್ಥೆಗೆ ಚಿಂತನೆ
ಅಕ್ಷಯನಗರ ಮುಖ್ಯ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು Odd-Even ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸುವ ಸಾಧ್ಯತೆಯನ್ನು ಸಂಚಾರ ಪೋಲಿಸ್ ಅಧಿಕಾರಿಗಳೊಂದಿಗೆ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬೇಸ್ಮೆಂಟ್ ಪಾರ್ಕಿಂಗ್ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವ ಸಂಸ್ಥೆಗಳಿಗೆ ನೋಟಿಸ್ ನೀಡಲು ಹಾಗೂ ಹುನಾಲಿ ಬ್ರೂ ಪಾರ್ಕ್ ಮತ್ತು ಡಿಮಾರ್ಟ್ ನಡುವಿನ 20 ಗುಂಟೆ ಖರಾಬು ಜಮೀನನ್ನು ರಸ್ತೆ ವಿಸ್ತರಣೆಗಾಗಿ ಸರ್ವೇ ನಡೆಸಲು ಸೂಚಿಸಿದರು. ಇದನ್ನೂ ಓದಿ: ಬಂದ್ ವಾಪಸ್ ಪಡೆದ ಸಂಘಟನೆಗಳಿಗೆ ಕೃತಜ್ಞತೆ ತಿಳಿಸಿದ ಸಿಎಂ ಡಿಕೆಶಿ
ರಾಜಕಾಲುವೆ ಹೂಳೆತ್ತುವಿಕೆ ಹಾಗೂ ರಸ್ತೆ ಪುನಶ್ಚೇತನ
ಅಕ್ಷಯನಗರದ ರಾಜಕಾಲುವೆಗಳಲ್ಲಿ ಹೂಳು ತೆಗೆಯುವ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸಿ ಮಳೆಗಾಲದಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಲು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಎಲೆನಹಳ್ಳಿ ಸರ್ಕಾರಿ ಶಾಲೆಯ ಸಮೀಪ BWSSB ಹಾಗೂ BESCOM ಕಾಮಗಾರಿಗೆ ಅಗೆದಿರುವ ರಸ್ತೆಯನ್ನು ತ್ವರಿತವಾಗಿ ಪುನಶ್ಚೇತನ ಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ತ್ಯಾಜ್ಯ ನಿರ್ವಹಣೆಗೆ 5 ಹೆಚ್ಚುವರಿ ಆಟೋ ನಿಯೋಜನೆ
ಅಕ್ಷಯನಗರದಲ್ಲಿ ಮನೆಮನೆ ತ್ಯಾಜ್ಯ ಸಂಗ್ರಹಣೆ ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ ಎಂದು ಸ್ಥಳೀಯರು ನೀಡಿದ ಅಹವಾಲಿನ ಮೇರೆಗೆ ಮನೆಮನೆ ತ್ಯಾಜ್ಯ ಸಂಗ್ರಹಣೆ ಪರಿಣಾಮಕಾರಿಗೊಳಿಸಲು 5 ಹೆಚ್ಚುವರಿ ಆಟೋಗಳನ್ನು ನಿಯೋಜಿಸಲು BSWML ಅಧಿಕಾರಿಗಳಿಗೆ ಸೂಚನೆ ನೀಡಿದರು.
