ಬೆಂಗಳೂರು: ರಾಜ್ಯದಲ್ಲಿ ಮಾಹಿತಿಯುಕ್ತ, ಗೌರವಯುತ ಮತ್ತು ದೃಢವಾದ ವೈವಾಹಿಕ ಸಂಬಂಧಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಜಂಟಿ ಸಹಯೋಗದಲ್ಲಿ ‘ತೇರೆ- ಮೇರೇ ಸಪ್ನೆ – ಕೂಡಿ ಬಾಳೋಣ’ ವಿವಾಹ ಪೂರ್ವ ಸಂವಹನ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದರು.
ಇಂದು ಬೆಂಗಳೂರಿನ ಜವಹರ್ ಬಾಲ ಭವನದಲ್ಲಿ ಆಯೋಜಿಸಲಾಗಿದ್ದ ಸಾಂತ್ವನ ಕೇಂದ್ರಗಳ ಸಲಹೆಗಾರರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಯೋಜನೆಯ ಕುರಿತು ಸಂಪೂರ್ಣ ಮಾಹಿತಿ ನೀಡಿದರು.
“ಇಂದಿನ ವೇಗವಾಗಿ ಬದಲಾಗುತ್ತಿರುವ ಸಾಮಾಜಿಕ ಪರಿಸರದಲ್ಲಿ ಮದುವೆಗೆ ಮುನ್ನ ಯುವಜನರಲ್ಲಿ ಭಾವನಾತ್ಮಕ ಸಿದ್ಧತೆ, ಪರಸ್ಪರ ಗೌರವ ಹಾಗೂ ಧನಾತ್ಮಕ ಸಂವಹನ ಬೆಳೆಸುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ 178 ಸಾಂತ್ವನ ಕೇಂದ್ರಗಳ ಮೂಲಕ ವಿವಾಹ ಪೂರ್ವ ಸಂವಹನ ಕೇಂದ್ರಗಳನ್ನು (PMCC) ಸ್ಥಾಪಿಸುತ್ತಿದ್ದು, ಉಚಿತ ಸಮಾಲೋಚನೆ ಒದಗಿಸುವ ಮೂಲಕ ಕುಟುಂಬ ಸಂಸ್ಥೆಯನ್ನು ಬಲಪಡಿಸಲು ಈ ಯೋಜನೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ” ಎಂದು ತಿಳಿಸಿದರು.
ಯುವಜನರು ಮದುವೆಗೂ ಮುನ್ನ ಅಗತ್ಯ ಜೀವನ ಕೌಶಲ್ಯಗಳನ್ನು ರೂಢಿಸಿಕೊಳ್ಳುವುದು, ಆರ್ಥಿಕ ಯೋಜನೆ ಮಾಡುವುದು ಹಾಗೂ ದೈನಂದಿನ ಕೌಟುಂಬಿಕ ಸಮಸ್ಯೆಗಳನ್ನು ಪ್ರಬುದ್ಧತೆಯಿಂದ ಪರಿಹರಿಸಿಕೊಳ್ಳಲು ಈ ಕೇಂದ್ರಗಳು ಮಾರ್ಗದರ್ಶನ ನೀಡಲಿವೆ ಎಂದು ಅವರು ವಿವರಿಸಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ (NCW), ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಆಯೋಗದ (KSWC) ನಡುವೆ ಮಹತ್ವದ ತಿಳಿವಳಿಕೆ ಒಡಂಬಡಿಕೆಗೆ (MoU) ಸಹಿ ಹಾಕಲಾಯಿತು.
