ಬೆಂ.ಗ್ರಾ ಜಿಲ್ಲೆ: ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ಇಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆಗಳನ್ನು ಪರಿಶೀಲಿಸಿದರು.
ದೊಡ್ಡಬಳ್ಳಾಪುರ ತಾಲೂಕಿನ ಕಂಟನಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಟನಕುಂಟೆ ಗ್ರಾಮ, ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಳೂರು ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆಗಳನ್ನು ಪರಿಶೀಲಿಸಿ, ಕೋಳೂರು ಕೆರೆ ವೀಕ್ಷಿಸಿದರು.
ನೆಲಮಂಗಲ ತಾಲೂಕಿನ ಕಸಬಾ ಹೋಬಳಿಯ ಮಂಡಿಗೆರೆ ಹಾಗೂ ಬರದಿ ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿ ಅಲ್ಲಿನ ಬೆಳೆಗಳ ಸ್ಥಿತಿಗತಿ ಪರಿಶೀಲನೆ ನಡೆಸಿ ಬರದಿ ಗ್ರಾಮದ ಕೆರೆ ವೀಕ್ಷಿಸಿದರು.
ಬಳಿಕ ಮಾತನಾಡಿ ಮುಂಗಾರು ಮಳೆ ಕೊರತೆಯಾಗುವ ಸಂಭವವಿದ್ದು ರೈತರು ಕಡಿಮೆ ಅವಧಿಯ ರಾಗಿ ಬಿತ್ತನೆ ಮಾಡಿ, ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಸಮರ್ಪಕವಾಗಿ ಲಭ್ಯವಿದೆ. ಕಡಿಮೆ ಅವಧಿಯ ರಾಗಿ ಬೆಳೆ ಬಗ್ಗೆ ಕೃಷಿ ಅಧಿಕಾರಿಗಳ ಬಳಿ ಮಾಹಿತಿ ಪಡೆದು ಬಿತ್ತನೆ ಮಾಡಿ ಎಂದು ರೈತರಿಗೆ ಸಲಹೆ ನೀಡಿದರು.
ಈಗಾಗಲೇ ಹಲವು ಭಾಗಗಳಲ್ಲಿ ರೈತರು ರಾಗಿ ಬಿತ್ತನೆ ಮಾಡಿದ್ದು ಮಳೆ ಕೊರತೆಯಿಂದ ರಾಗಿ ಬೆಳೆದಿಲ್ಲ. ಅಧಿಕಾರಿಗಳು ರೈತರ ಮನವೊಲಿಸಿ ಬೆಳೆ ವಿಮೆಗೆ ನೋಂದಾಯಿಸಲು ಕ್ರಮ ಕೈಗೊಳ್ಳಬೇಕು ಎಂದರು. ಯಾವೊಬ್ಬ ರೈತ ಕೂಡ ಬೆಳೆ ವಿಮೆ ವಂಚಿತರಾಗಬಾರದು. ರೈತರು ತಪ್ಪದೇ ಬೆಳೆ ವಿಮೆ ಮಾಡಿಸಿ, ಮಳೆ ಅಭಾವ ಸೃಷ್ಟಿ ಆದಲ್ಲಿ ನಷ್ಟ ಪರಿಹಾರ ಸಿಗಲಿದೆ ಎಂದರು.
ಸಾಕಷ್ಟು ಕೆರೆಗಳಲ್ಲಿ ನೀರು ಖಾಲಿಯಾಗಿದ್ದು ಬಿದಿರು, ಜಾಲಿ ಮರಗಳು ಬೆಳೆದಿವೆ. ಅರಣ್ಯ ಇಲಾಖೆಯೊಂದಿಗೆ ಚರ್ಚಿಸಿ ಶೀಘ್ರ ಎಲ್ಲಾ ಮರಗಳನ್ನು ತೆರವುಗೊಳಿಸಿ ಕೆರೆಗಳನ್ನು ಸ್ವಚ್ಚಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಇದನ್ನೂ ಓದಿ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ: ಯತೀಂದ್ರ
ಸಂಸ್ಕರಿಸಿದ ವೃಷಭಾವತಿ ನೀರು ಈ ನೆಲಮಂಗಲ ಹಾಗೂ ದೊಡ್ಡಬಳ್ಳಾಪುರ ಭಾಗದ ಕೆರೆಗಳಿಗೆ ಬರಲಿದೆ. ಜೊತೆಗೆ ಎತ್ತಿನಹೊಳೆ ನೀರು ಬರಲಿದೆ. ಕೆರೆಗಳಲ್ಲಿ ನೀರು ತುಂಬುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ರೈತರಿಗೆ ಅನುಕೂಲವಾಗಲಿದೆ ಎಂದರು.
ರಾಜ್ಯಾದ್ಯಂತ ಬರ ಅಧ್ಯಯನಕ್ಕೆ ಸಚಿವರನ್ನು ನೇಮಿಸಲಾಗಿದ್ದು ಎಲ್ಲಾ ಜಿಲ್ಲೆಗಳ ಬರ ಪರಿಸ್ಥಿತಿಯ ಮಾಹಿತಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು. ಮಳೆ ಕೊರತೆ ಉಂಟಾದಲ್ಲಿ ಆಗಸ್ಟ್ 30 ರ ನಂತರ ರಾಜ್ಯದಲ್ಲಿನಲ್ಲಿ ಬರ ಪರಿಸ್ಥಿತಿ ಕುರಿತು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.
