ಬೆಂಗಳೂರು: ದೇಹ ಮತ್ತು ಸಮಾಜವನ್ನು ಆರೋಗ್ಯಪೂರ್ಣವಾಗಿಸಲು ಪಣತೊಟ್ಟು ನಿಂತಿರುವ ಭೋವಿ ವೈದ್ಯರ ಸಂಘಟನೆಯ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರು ಪ್ರಶಂಸಿಸಿದರು.
ಮಹಾಲಕ್ಷ್ಮಿ ಪುರಂ ನಗರದಲ್ಲಿ ಕರ್ನಾಟಕ ಭೋವಿ ವೈದ್ಯರು ವೈದ್ಯಕೀಯ ಸಂಶೋಧನಾ ಸಂಸ್ಥೆ (ರಿ) ವತಿಯಿಂದ ಉಚಿತ ವೈದ್ಯಕೀಯ ಆರೋಗ್ಯದ ತಪಾಸಣಾ ಶಿಬಿರದ ಸಾನ್ನಿಧ್ಯವಹಿಸಿ ಮಾತನಾಡಿದ ಪೂಜ್ಯರು, ವೈದ್ಯರು ಎರಡನೇ ತಾಯಿ, ಎರಡನೇ ದೇವರು
“ವೈದ್ಯೋ ನಾರಾಯಣ ಹರಿ” ಎಂಬ ನಾಣ್ಣುಡಿಯನ್ನು ಸ್ಮರಿಸಿದ ಶ್ರೀಗಳು, “ತಾಯಿ ತನ್ನ ಗರ್ಭದಲ್ಲಿ ಒಂಬತ್ತು ತಿಂಗಳು ಹೊತ್ತು ಜೀವ ನೀಡಿದರೆ, ವೈದ್ಯರು ಮಾನವನ ಪೂರ್ಣ ಆಯಸ್ಸನ್ನು ಕಾಪಾಡುವ ಆರೋಗ್ಯಧಾತರಾಗಿದ್ದಾರೆ. ಅತ್ಯಂತ ಕಷ್ಟಪಟ್ಟು ವೈದ್ಯಕೀಯ ಶಿಕ್ಷಣವನ್ನು ಪಡೆದು, ನಿರಂತರ ಒತ್ತಡದ ಬದುಕಿನ ನಡುವೆಯೂ ವೈದ್ಯರು ಕಾರ್ಯನಿರ್ವಹಿಸುತ್ತಾರೆ. ಇಂತಹ ಬಿಡುವಿಲ್ಲದ ವೇಳೆಯಲ್ಲೂ ಸಮಯವನ್ನು ಮಾಡಿಕೊಂಡು, ‘ಜನಸೇವೆಯೇ ಜನಾರ್ದನ ಸೇವೆ’ ಎಂದು ಭಾವಿಸಿ ಉಚಿತ ವೈದ್ಯಕೀಯ ಶಿಬಿರಗಳನ್ನು ಏರ್ಪಡಿಸುತ್ತಿರುವುದು ಅವರ ಸಾಮಾಜಿಕ ಜವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ. ಈ ನಿಟ್ಟಿನಲ್ಲಿ ವೈದ್ಯರು ನಮಗೆ ಎರಡನೇ ತಾಯಿ ಹಾಗೂ ಎರಡನೇ ದೇವರಿದ್ದಂತೆ” ಎಂದು ಬಣ್ಣಿಸಿದರು.
ಬಾಬಾಸಾಹೇಬರ ಆಶಯದಂತೆ ಪ್ರಜ್ಞಾವಂತ ಸಮಾಜ ನಿರ್ಮಾಣ ; “ಡಾ. ಬಿ.ಆರ್. ಅಂಬೇಡ್ಕರ್ ಅವರ ‘ಶಿಕ್ಷಣ, ಸಂಘಟನೆ, ಹೋರಾಟ’ ಎಂಬ ಮಹಾನ್ ಸೂತ್ರವನ್ನು ಭೋವಿ ಸಮುದಾಯದ ವೈದ್ಯರು ಸರಿಯಾಗಿ ಅರ್ಥೈಸಿಕೊಂಡಿದ್ದಾರೆ. ಕೇವಲ ಶಿಕ್ಷಣವಂತರಾಗುವುದಷ್ಟೇ ಅಲ್ಲದೆ, ಸಮುದಾಯದ ಎಲ್ಲಾ ವೈದ್ಯರನ್ನು ಒಂದೇ ವೇದಿಕೆಯಡಿ ತಂದು ಸಂಘಟಿಸುತ್ತಿರುವುದು ಹೆಮ್ಮೆಯ ವಿಚಾರ. ಈ ಮೂಲಕ ವಿದ್ಯಾವಂತರು ಹಾಗೂ ಶಿಕ್ಷಣವಂತರು ಒಟ್ಟಾಗಿ ಇಡೀ ಸಮಾಜವನ್ನು ಪ್ರಜ್ಞಾವಂತರ ಸಮುದಾಯವನ್ನಾಗಿ ಮಾಡಲು ಪಣತೊಟ್ಟಿರುವುದು ಶ್ಲಾಘನೀಯ,” ಎಂದು ಆಶೀರ್ವಚನ ನೀಡಿದರು. ಇದನ್ನೂ ಓದಿ: ಆಗಸ್ಟ್ 7 ರಂದು ನಡೆಯಲಿರುವ ರಾಷ್ಟ್ರೀಯ ಒಬಿಸಿ ಮಹಾಸಭೆಗೆ ಮುಖ್ಯಮಂತ್ರಿಗಳಿಗೆ ಆಹ್ವಾನ
ಶಿಬಿರದಲ್ಲಿ ನೂರಾರು ಸಾರ್ವಜನಿಕರು ಪಾಲ್ಗೊಂಡು ಉಚಿತ ಆರೋಗ್ಯ ತಪಾಸಣೆಯ ಸೌಲಭ್ಯವನ್ನು ಪಡೆದುಕೊಂಡರು.
ಕಾರ್ಯಕ್ರಮವನ್ನು ಶಾಸಕರಾದ ಕೆ. ಗೋಪಾಲಯ್ಯ ಉದ್ಘಾಟಿಸಿದರು.
ಸಮಾರಂಭದಲ್ಲಿ ಭೋವಿ ವೈದ್ಯರ ಸಂಘಟನೆಯ ಪದಾಧಿಕಾರಿಗಳಾದ ಸ್ಥಾಪಕ ಅಧ್ಯಕ್ಷರಾದ ಆರ್ ಹರಿಕುಮಾರ್, ಅಧ್ಯಕ್ಷರಾದ ಡಾ. ಚಿದಾನಂದ ಎಚ್ ಗುಡೂರ್, ಡಾ. ಕೆ. ಶ್ಯಾಮ್ ಸುಂದರ್, ಖಜಾಂಚಿ ಡಾ. ಮಮತಾಶ್ರೀ ವಿ, ಗೌರವಾಧ್ಯಕ್ಷರಾದ ಡಾ. ರಾಮಯ್ಯ, ಸಲಹಾ ಸಮಿತಿ ಅಧ್ಯಕ್ಷರಾದ ಹೆಚ್. ಬಾಲಶೇಖರ್, ಮಾರ್ಗದರ್ಶಕರಾದ ಡಾ. ವಿವೇಕ್ ದೊರೈ ಕಾರ್ಯಕಾರಿ ಸಮಿತಿ ಉಪಾಧ್ಯಕ್ಷರಾದ ಡಾ.ನಿರ್ಮಲಾ ಸಿ.ಎಚ್, ಡಾ. ಕೆ ಚಂದ್ರಶೇಖರ್, ಜಂಟಿ ಕಾರ್ಯದರ್ಶಿಯಾದ ಡಾ. ಭರತ್ ಭೂಶನ್ ಎಂ, ಆಂತರಿಕ ಲೆಕ್ಕ ಪರಿಶೋಧಕರಾದ ಡಾ. ಬಾಬು ಗಿರಿಶ್ ಹೆಚ್, ವೈದ್ಯಕೀಯ ನಿರ್ದೇಶಕರಾದ ಡಾ. ತುಲಸಿ ದೇವಿ, ಡಾ. ಚಂದ್ರ ಶೇಖರ್ ಬಿ ಜಿ, ಡಾ. ಸ್ನೇಹಾ ವಿ, ಡಾ.ಮಹೇಶ್ ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ ಚಂದ್ರ ಶೇಖರ ಪಿ, ಡಾ. ಎನ್. ಕಿಶೋರ್ ಕುಮಾರ್ ಹಾಗೂ ಸಮುದಾಯದ ಮುಖಂಡರು, ಪ್ರಮುಖರು ಉಪಸ್ಥಿತರಿದ್ದರು.
