ಹಾವೇರಿ: ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಜಿಲ್ಲಾಡಳಿತ ತನ್ನ ಹಿಡಿತವನ್ನು ಕಳೆದುಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಕೊಲೆಯಾದ ಶಿವಾಜಿರಾವ್ ಬೈರೋಜಿ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಸರಣಿ ಅಪರಾಧ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಘಟನೆಗಳ ಕುರಿತು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಭರತ್ ಮತ್ತು ಅವರ ತಂದೆ ಕಳೆದ 60 ವರ್ಷಗಳಿಂದ ಅಲ್ಲಿ ವ್ಯಾಪಾರ ಮಾಡಿಕೊಂಡಿದ್ದಾರೆ. ಮೊಟ್ಟೆ ಕೇಳಲು ಬಂದು, ಹಣದ ವಿಚಾರವಾಗಿ ಗಲಾಟೆ ಮಾಡಿದ್ದು ಕೇವಲ ಒಂದು ಸಣ್ಣ ಕಾರಣವಷ್ಟೇ. ಆದರೆ ಇದರ ಹಿಂದಿನ ಅಸಲಿ ಉದ್ದೇಶ ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸಿ, ಅಲ್ಲಿರುವ ಎಲ್ಲಾ ಅಂಗಡಿಗಳನ್ನು ತಮ್ಮ ವಶಕ್ಕೆ ಪಡೆಯುವುದಾಗಿದೆ” ಎಂದು ಆರೋಪಿಸಿದರು. ಇದನ್ನೂ ಓದಿ: ಸಚಿವ ಎಂ ಬಿ ಪಾಟೀಲರ ಜತೆ ಹಾಂಕಾಂಗ್ ಕಾನ್ಸುಲ್ ಜನರಲ್ ಚರ್ಚೆ
ರಾಜಕೀಯ ಕುಮ್ಮಕ್ಕಿನಿಂದ ಹೆಚ್ಚಿದ ಧೈರ್ಯ
ಜಿಲ್ಲೆಯಲ್ಲಿ ಕೋಮು ಸೌಹಾರ್ದತೆಯನ್ನು ಕೆಡಿಸುವ ದುರುದ್ದೇಶ ಇಟ್ಟುಕೊಳ್ಳಲಾಗಿದೆ ಎಂದ ಅವರು, ಇಂತಹ ಶಕ್ತಿಗಳಿಗೆ ದೊಡ್ಡ ಪ್ರಮಾಣದಲ್ಲಿ ರಾಜಕೀಯ ಬೆಂಬಲ ಮತ್ತು ಕುಮ್ಮಕ್ಕು ಸಿಗುತ್ತಿರುವುದರಿಂದಲೇ ಇಷ್ಟೊಂದು ಧೈರ್ಯ ಬಂದಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಯಾವುದೇ ಸಣ್ಣ ಕೋಮು ಗಲಭೆಯೂ ನಡೆದಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಹಾವೇರಿ ಜಿಲ್ಲೆಯಲ್ಲಿ, ವಿಶೇಷವಾಗಿ 7-8 ಗಂಭೀರ ಪ್ರಕರಣಗಳು ನಡೆದಿವೆ ಎಂದರು.
