ಚಿತ್ರದುರ್ಗ: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಈಗಾಗಲೇ ಮೂರು ವರ್ಷ ಕಳೆದಿದೆ.ಅಧಿಕಾರಕ್ಕೆ ಬಂದು 3 ವರ್ಷಗಳೇ ಕಳೆದರೂ ಜನಸಾಮಾನ್ಯರ ಹಿತ ಮರೆತು, ಸುಳ್ಳು ಭರವಸೆಗಳಲ್ಲೇ ಕಾಲ ಕಳೆಯುತ್ತಿರುವ ಈ ಸರ್ಕಾರದ ಅಸಲಿ ಮುಖವನ್ನು ಸಾರ್ವಜನಿಕರ ಮುಂದೆ ಅನಾವರಣಗೊಳ್ಳುತ್ತಿದೆ ಎಂದು ಸಂಸದ ಗೋವಿಂದ ಕಾರಜೋಳ ಅವರು ಹೇಳಿದರು
ಚಿತ್ರದುರ್ಗದಲ್ಲಿ ಇಂದು (ಬುಧವಾರ ಜೂ. 24) ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳು, ಜನವಿರೋಧಿ ನೀತಿಗಳು ಹಾಗೂ ತುಷ್ಟೀಕರಣದ ರಾಜಕಾರಣವನ್ನು ಜನರು ತೀವ್ರವಾಗಿ ಖಂಡಿಸುತ್ತಿದ್ದಾರೆ.
ರಾಷ್ಟ್ರಭಕ್ತಿ ಮತ್ತು ಸಮಾಜ ಸೇವೆಯನ್ನೇ ಉಸಿರಾಗಿಸಿಕೊಂಡಿರುವ ಆರ್ಎಸ್ಎಸ್ (RSS) ಸಂಸ್ಥೆಯ ವಿರುದ್ಧ ಪ್ರಿಯಾಂಕ ಖರ್ಗೆಯವರು ನೀಡಿರುವ ಬೇಜವಾಬ್ದಾರಿ ಹೇಳಿಕೆ ಖಂಡನೀಯ. ಉಚಿತ ವಿದ್ಯುತ್ ಎಂದು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಈಗ ಹಿಂಬಾಗಿಲಿನಿಂದ ವಿದ್ಯುತ್ ವಲಯವನ್ನು ಖಾಸಗೀಕರಣ ಮಾಡಲು ಹೊರಟಿರುವುದು ಜನತೆಗೆ ಮಾಡುವ ದ್ರೋಹ ಎಂದರು. ಇದನ್ನೂ ಓದಿ: ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠ ಸ್ಥಾಪನೆಗೆ ಒತ್ತಾಯ: ಬಿ.ವೈ.ರಾಘವೇಂದ್ರ
ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪುತ್ತಿಲ್ಲ. ವೃದ್ಧರು, ವಿಕಲಚೇತನರ ಪಿಂಚಣಿಗಳು ಕಡಿತ ಗೊಳಿಸಿ ಉಳಿದಂತ ಪಿಂಚಣಿದಾರರಿಗೆ ಸಕಾಲಕ್ಕೆ ಸಿಗುತ್ತಿಲ್ಲ. ರೈತರ ಸಹಾಯಧನಗಳನ್ನ ಕಡಿತಗೊಳಿಸಿ ಅನ್ನದಾತರನ್ನು ಬೀದಿಗೆ ತಳ್ಳಲಾಗಿದೆ.
ಬಡವರ ಹಸಿವು ನೀಗಿಸಬೇಕಾದ ಪಡಿತರ ವಿತರಣೆ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ರಾಜ್ಯವನ್ನು ದಿವಾಳಿ ಮುಖಕ್ಕೆ ತಳ್ಳುತ್ತಿರುವ, ರೈತ ವಿರೋಧಿ, ಬಡವರ ವಿರೋಧಿ ಈ ಕಾಂಗ್ರೆಸ್ ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ತಿಳಿಸಿದರು.
