ಶಿವಮೊಗ್ಗ: ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠ ಸ್ಥಾಪನೆಗೆ ನಡೆಯುತ್ತಿರುವ ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬುವ ನಿಟ್ಟಿನಲ್ಲಿ, ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ವಿಶೇಷವಾಗಿ ಮಲೆನಾಡು ಮತ್ತು ಮಧ್ಯ ಕರ್ನಾಟಕದ ಜನರ ಪ್ರಯೋಜನಕ್ಕಾಗಿ ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠ ಸ್ಥಾಪನೆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯಪ್ರವೃತ್ತವಾಗುವಂತೆ ತುರ್ತು ಸಲಹೆ ನೀಡುವಂತೆ ಕೋರಿ ಕರ್ನಾಟಕದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಔಪಚಾರಿಕ ಮನವಿ ಸಲ್ಲಿಸಿದ್ದಾರೆ.
ಸಂಸದ ರಾಘವೇಂದ್ರ ಅವರು ಇಂದು (ಮಂಗಳವಾರ ಜೂ. 23) ಲೋಕ ಭವನದಲ್ಲಿ ಕರ್ನಾಟಕದ ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ, ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠ ಸ್ಥಾಪನೆಗೆ ಕೋರಿ ವಿವರವಾದ ಪ್ರಾತಿನಿಧ್ಯವನ್ನು ಸಲ್ಲಿಸಿದರು.
ಭೇಟಿಯ ಸಂದರ್ಭದಲ್ಲಿ ಸಂಸದರು, ಶಿವಮೊಗ್ಗದ ಭೌಗೋಲಿಕ ಅನುಕೂಲ ಮತ್ತು ಮಧ್ಯ ಕರ್ನಾಟಕದ ಪ್ರಮುಖ ಆಡಳಿತ, ಶೈಕ್ಷಣಿಕ, ವಾಣಿಜ್ಯ ಮತ್ತು ಸಾರಿಗೆ ಕೇಂದ್ರವಾಗಿ ಜಿಲ್ಲೆ ಹೊರಹೊಮ್ಮಿರುವುದರ ಕಡೆಗೆ ರಾಜ್ಯಪಾಲರ ಗಮನ ಸೆಳೆದಿದ್ದಾರೆ. ಶಿವಮೊಗ್ಗದಲ್ಲಿ ಸರ್ಕ್ಯೂಟ್ ಪೀಠ ಸ್ಥಾಪನೆಯಿಂದ ಶಿವಮೊಗ್ಗ ಜಿಲ್ಲೆಯ ಜನರಿಗೆ ಮಾತ್ರವಲ್ಲದೆ ಚಿಕ್ಕಮಗಳೂರು, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳು ಸೇರಿದಂತೆ ಮಲೆನಾಡು ಮತ್ತು ಮಧ್ಯ ಕರ್ನಾಟಕ ಪ್ರದೇಶದ ಜನರಿಗೆ ಹಾಗೂ ನ್ಯಾಯಿಕ ವಲಯಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಒತ್ತಿ ತಿಳಿಸಿದ್ದಾರೆ, ಇದರಿಂದಾಗಿ ನ್ಯಾಯ ಪ್ರಾಪ್ತಿಯ ಜನರ ಹಕ್ಕು ಹೆಚ್ಚು ಸುಲಭವಾಗಿ, ಅನುಕೂಲಕರವಾಗಿ ಮತ್ತು ಪರಿಣಾಮಕಾರಿಯಾಗಿ ಸಾಧ್ಯವಾಗಲಿದೆ ಎಂದಿದ್ದಾರೆ. ಭೇಟಿಯ ಸಂದರ್ಭದಲ್ಲಿ ಬೆಂಗಳೂರಿನ ವಕೀಲರ ಸಂಘದ ಅಧ್ಯಕ್ಷರಾದ ವಿವೇಕ್ ಸುಬ್ಬಾರೆಡ್ಡಿ ಅವರು ಉಪಸ್ಥಿತರಿದ್ದರು ಮತ್ತು ಸಂಸದರ ಬೇಡಿಕೆಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.
