ತುಮಕೂರು: ಪ್ರತಿನಿತ್ಯ ಕಲ್ಪತರ ನಾಡು ತುಮಕೂರಿಂದ ಸಿಲಿಕಾನ್ ಸಿಟಿ ಬೆಂಗಳೂರಿಗೆ ಉದ್ಯೋಗ ಹಾಗೂ ಶಿಕ್ಷಣ ಸೇರಿದಂತೆ ಇನ್ನು ಹಲವಾರು ಕೆಲಸ ಕಾರ್ಯಗಳಿಗೆ ಪ್ರತಿನಿತ್ಯ ಸಾರ್ವಜನಿಕರು ರೈಲುಗಳಲ್ಲಿ ಪ್ರಯಾಣಿಸುತ್ತಾರೆ.
ಈಗ ಕೇವಲ ಎರಡು ಪಥಗಳ ರೈಲ್ವೆ ಹಳಿ ಇರುವುದರಿಂದ ಪ್ರತಿನಿತ್ಯ ಸಂಚರಿಸುವ ಪ್ರಯಾಣಿಕರಿಗೆ ಇದು ಕೊಂಚ ತೊಂದರೆಯಾಗಿದ್ದು, ಇದಕ್ಕೆ ಶಾಶ್ವತ ಮುಕ್ತಿ ನೀಡಲು ಇದೀಗ ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ ಸೋಮಣ್ಣ ಅವರು ಮುಂದಾಗಿದ್ದು, ತುಮಕೂರು ಹಾಗೂ ಬೆಂಗಳೂರು ನಡುವಿನ ರೈಲ್ವೆ ಕಾಮಗಾರಿಗಳ ಕುರಿತಾಗಿ ಮಹತ್ವದ ಘೋಷಣೆಯೆಂದನ್ನ ಘೋಷಿಸಿದ್ದಾರೆ. ಇದನ್ನೂ ಓದಿ: ಅಂಡರ್ ಗ್ರೌಂಡ್ ವಿದ್ಯುತ್ ಕೇಬಲ್ ಅಳವಡಿಕೆಗೆ ಚಾಲನೆ
ಬೆಂಗಳೂರು-ತುಮಕೂರು ನಡುವೆ ಚತುಷ್ಪಥ ರೈಲು ಮಾರ್ಗ ನಿರ್ಮಾಣದ ಪೂರ್ವ ಸಿದ್ಧತೆಗಳು ಚುರುಕಾಗಿವೆ ಎಂದು ತಿಳಿಸಿದ್ದಾರೆ. ಈ ಉದ್ದೇಶಿತ ಬೃಹತ್ ಯೋಜನೆಗಾಗಿ ಈಗಾಗಲೇ ವಿಸ್ತೃತ ಯೋಜನಾ ವರದಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಅಷ್ಟೇ ಅಲ್ಲದೆ, ರೈಲ್ವೆ ಇಲಾಖೆಯ ಅತ್ಯುನ್ನತ ತಾಂತ್ರಿಕ ಸಮಿತಿಯು ಈ ವರದಿಯನ್ನು ಪರಿಶೀಲಿಸಿ ಅನುಮೋದನೆ ನೀಡಿದೆ. ಸದ್ಯ ಈ ಪ್ರಕ್ರಿಯೆಯು ರೈಲ್ವೆ ಮಂಡಳಿಯ ಅಂತಿಮ ಒಪ್ಪಿಗೆಯ ಹಂತದಲ್ಲಿದ್ದು, ಬೋರ್ಡ್ ಮುದ್ರೆ ಬೀಳುತ್ತಿದ್ದಂತೆ ಯೋಜನೆ ಅಧಿಕೃತವಾಗಿ ಕಾರ್ಯರೂಪಕ್ಕೆ ಬರಲಿದೆ ಎಂದು ಸಚಿವರು ತಿಳಿಸಿದ್ದಾರೆ.
