ದೆಹಲಿ: ಡಿಕೆ ಶಿವಕುಮಾರ್ ಅವರು ನಾಳೆ (ಬುಧವಾರ ಜೂನ್ 03) ರಂದು ಅದ್ದೂರಿಯಾಗಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ಎಲ್ಲಾ ರೀತಿಯ ಸಿದ್ಧತೆ ನಡೆಯುತ್ತಿದ್ದು, ಇದರ ಬೆನ್ನಲ್ಲೇ ಇದೀಗ ಡಿಕೆಶಿಯವರ ನೇತೃತ್ವದಲ್ಲಿ ಸಚಿವ ಸಂಪುಟ ರಚಿಸಲು ಹೈಕಮಾಂಡ್ ಚಿಂತನೆ ನಡೆಸಿದ್ದು, ಕೆಲ ಕಾಂಗ್ರೆಸ್ ಶಾಸಕರು ತೆರೆ ಮರೆಯಲ್ಲಿ ಹಲವು ಕಸರತ್ತು ನಡೆಸುತ್ತಿದ್ದಾರೆ.
ಹೌದು, ಡಿಕೆ ಶಿವಕುಮಾರ್ ಅವರು ನಾಳೆ ಅದ್ದೂರಿಯಾಗಿ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಲು ಎಲ್ಲಾ ರೀತಿ ಸಿದ್ಧತೆ ನಡೆಸಿಕೊಳ್ಳುವುದರ ಜೊತೆಗೆ ನಾಳೆಯೇ ಸುಮಾರು ಹತ್ತರಿಂದ ಹನ್ನೆರಡು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ಕಾಂಗ್ರೆಸ್ ನಲ್ಲಿ ಭರ್ಜರಿ ಸಿದ್ದತೆ ನಡೆಸುತ್ತಿದೆ ಎನ್ನಲಾಗುತ್ತಿದೆ.
ಇನ್ನು ಈ ಕುರಿತು ಈಗಾಗಲೇ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಅವರು ಇಂದು (ಮಂಗಳವಾರ ಜೂನ್ 02) ಕಾಂಗ್ರೆಸ್ ಹೈಕಮಾಂಡರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸುತ್ತಿದ್ದಾರೆ.
ಈ ಸಭೆಯಲ್ಲಿಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಕಾಂಗ್ರೆಸ್ ಅಗ್ರ ನಾಯಕ ರಾಹುಲ್ ಗಾಂಧಿ, ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸೇರಿದಂತೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿ ಮಾನಸಿಕವಾಗಿ ಕುಗ್ಗಿದ್ರಾ ನಟ ದರ್ಶನ್? ಫೋಟೋ ನೋಡಿ ಶಾಕ್ ಆದ ಅಭಿಮಾನಿಗಳು!
ಸಂಪುಟದಲ್ಲಿ ಹಳೆ ಬೇರು, ಹೊಸ ಚಿಗುರು ಫಾರ್ಮುಲಾ ಅನ್ವಯಿಸಲು ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದೆ. ಇದರಂತೆ ಅನುಭವಿ ಹಿರಿಯ ನಾಯಕರ ಜೊತೆಗೆ ಯುವ ಮತ್ತು ಹೊಸ ಮುಖಗಳಿಗೂ ಹೆಚ್ಚಿನ ಆದ್ಯತೆ ಸಿಗಲಿದೆ.
ಇನ್ನು ಹೈಕಮಾಂಡ್ 2 ಹಂತಗಳಲ್ಲಿ ಸಂಪುಟ ರಚನೆ ಮಾಡಲು ಕರಡು ಸಿದ್ಧಪಡಿಸಿದೆ. ಮೊದಲ ಹಂತದಲ್ಲಿ ಕೇವಲ 10 ರಿಂದ 12 ಪ್ರಮುಖ ಶಾಸಕರು ಮಾತ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಮುಂಬರುವ ವಿಧಾನ ಪರಿಷತ್ ಹಾಗೂ ರಾಜ್ಯಸಭೆ ಚುನಾವಣೆಗಳು ಮುಗಿದ ನಂತರ, ಬಾಕಿ ಉಳಿದಿರುವ ಸ್ಥಾನಗಳನ್ನು ಭರ್ತಿ ಮಾಡುವ ಮೂಲಕ 2ನೇ ಹಂತದಲ್ಲಿ ಸಂಪುಟ ವಿಸ್ತರಣೆ ಮಾಡಲು ವರಿಷ್ಠರು ಲೆಕ್ಕಾಚಾರ ಹಾಕಿದ್ದಾರೆ ಎನ್ನಲಾಗುತ್ತಿದೆ.
