ಬೆಂಗಳೂರು: ಇಂದಿನಿಂದ ನೂತನ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ. ನನ್ನ ಪ್ರೀತಿಯ ವಿದ್ಯಾರ್ಥಿಗಳಿಗೆ ಶುಭವಾಗಲಿ, ಯಶಸ್ಸು ಸಿಗಲಿ ಎಂದು ಸರ್ಕಾರದ ಪರವಾಗಿ ಹಾಗೂ ವೈಯಕ್ತಿಕವಾಗಿ ಹಾರೈಸುತ್ತೇನೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ನಗರದಲ್ಲಿ ಇಂದು (ಸೋಮವಾರ ಜೂನ್ 1)ಮಾಧ್ಯಮಿ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಓದಿರುವ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಅತ್ಯಮೂಲ್ಯ ಮಾನವ ಸಂಪನ್ಮೂಲವಾಗಿ ತಮ್ಮದೇ ಆದ ಕೊಡುಗೆ ನೀಡಿದ್ದು, ಇಡೀ ವಿಶ್ವ ಇದಕ್ಕೆ ಸಾಕ್ಷಿಯಾಗಿದೆ. ನಮ್ಮ ಜ್ಞಾನದ ಭಂಡಾರ ಇಡೀ ವಿಶ್ವವನ್ನೇ ಆಕರ್ಷಿಸುತ್ತಿದೆ. ಜಗತ್ತಿನ ಬಹುತೇಕ ವಿಶ್ವ ವಿದ್ಯಾಲಯಗಳಲ್ಲಿ ನಮ್ಮ ವಿದ್ಯಾರ್ಥಿಗಳು ಓದಿ ಅನೇಕ ಸಾಧನೆ ಮಾಡಿದ್ದಾರೆ ಎಂದರು.
ನಮ್ಮಲ್ಲಿ ಅಮೂಲ್ಯ ಮಾನವ ಸಂಪನ್ಮೂಲಗಳಿವೆ. ಹೀಗಾಗಿ ಜಗತ್ತು ಭಾರತವನ್ನು ಕರ್ನಾಟಕ ಮೂಲಕ ನೋಡುತ್ತಿದೆ. ಇದೇ ಕಾರಣಕ್ಕೆ ನಮ್ಮ ಹಿರಿಯರು, ಐಐಟಿ, ಐಐಎಂ, ರಾಷ್ಟ್ರೀಯ ಕಾನೂನು ಕಾಲೇಜು, ಇಸ್ರೋ ಸೇರಿದಂತೆ ಹೆಚ್ ಎಎಲ್ ಹಾಗೂ ಇತರೆ ಪ್ರಮುಖ ಸಂಸ್ಥೆಗಳನ್ನು ಇಲ್ಲೇ ಆರಂಭಿಸಿದ್ದಾರೆ. ಇವುಗಳನ್ನು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಮಕ್ಕಳು ತಮ್ಮ ವಿದ್ಯಾಭ್ಯಾಸ ಮಾಡಬೇಕಾಗುತ್ತದೆ ಎಂದು ಸಲಹೆ ನೀಡಿದರು.
ಆತ್ಮ ವಿಶ್ವಾಸ ಕಳೆದುಕೊಳ್ಳಬಾರದು
ನಾವು ಕೃತಕಬುದ್ಧಿಮತ್ತೆ ಯುಗಕ್ಕೆ ಹೋಗುತ್ತಿದ್ದು, ಇದಕ್ಕೆ ಪೂರಕವಾಗಿ ವಿದ್ಯಾಭ್ಯಾಸ ಮಾಡಬೇಕು. ಮುಂದಿನ ದಿನಗಳಲ್ಲಿ ನಮ್ಮ ಶಿಕ್ಷಣ ನೀತಿಯನ್ನು ತಿಳಿಸಲಾಗುವುದು. ಈ ವರ್ಷ ನಿಮಗೆ ಶುಭವಾಗಲಿ, ಯಶಸ್ಸು ಸಿಗಲಿ. ಸರ್ಕಾರಿ ಶಾಲಾ ಮಕ್ಕಳು ಆತ್ಮ ವಿಶ್ವಾಸ ಕಳೆದುಕೊಳ್ಳಬಾರದು. ನಮ್ಮ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರಿದ್ದಾರೆ. ಖಾಸಗಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಷ್ಟೇ ಪ್ರತಿಭೆ ನಿಮ್ಮಲ್ಲೂ ಇದೆ ಎಂದು ತಿಳಿಸಿದರು.
