ಬೆಂಗಳೂರು: ಹವಾಮಾನ ಬದಲಾವಣೆ, ನಗರೀಕರಣ, ಅಂತರ್ಜಲ ಕುಸಿತ ಹಾಗೂ ಮೂಲಸೌಕರ್ಯಗಳ ಮೇಲಿನ ಒತ್ತಡದಂತಹ ಭವಿಷ್ಯದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಕೃತಕ ಬುದ್ಧಿಮತ್ತೆ (ಎಐ) ಮತ್ತು ಡಿಜಿಟಲ್ ತಂತ್ರಜ್ಞಾನಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ಎಐ ಆಧಾರಿತ ನಗರ ಜಲ ಆಡಳಿತದಲ್ಲಿ ಕರ್ನಾಟಕವು ರಾಷ್ಟ್ರಮಟ್ಟದಲ್ಲಿ ಮುಂಚೂಣಿಯಲ್ಲಿದೆ ಎಂದು ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್* ತಿಳಿಸಿ.
ಬೆಂಗಳೂರಿನಲ್ಲಿ ಇಂದು (ಬುಧವಾರ ಮೇ 27) ಎಲೆಟ್ಸ್ (elets) ಮತ್ತು ಕೆಪಿಎಂಜಿ (KPMG) ಸಹಯೋಗದೊಂದಿಗೆ ಬೆಂಗಳೂರು ಜಲಮಂಡಳಿ (BWSSB) ಆಯೋಜಿಸಿದ್ದ ‘ರಾಷ್ಟ್ರೀಯ ಎಐ ಮತ್ತು ಡಿಜಿಟಲ್ ವಾಟರ್ ಶೃಂಗಸಭೆ 2026’ ನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರು, ಮೈಸೂರು, ಮಂಗಳೂರು, ಧಾರವಾಡ ಮತ್ತು ಬೆಳಗಾವಿಯಂತಹ ನಗರಗಳ ಮೇಲೆ ನೀರಿನ ಒತ್ತಡ ಹೆಚ್ಚಾಗುತ್ತಿದೆ. ದಕ್ಷ, ಪಾರದರ್ಶಕ ಮತ್ತು ಜವಾಬ್ದಾರಿಯುತ ಸಾರ್ವಜನಿಕ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ತಂತ್ರಜ್ಞಾನ ಆಧಾರಿತ ಇಂಟಲಿಜೆಂಟ್ ಆಡಳಿತ ವ್ಯವಸ್ಥೆಗಳು ಅತ್ಯಗತ್ಯವಾಗಿವೆ ಎಂದು ತಿಳಿಸಿದರು.
ನಗರದ ನೀರು ಸರಬರಾಜು ಮಂಡಳಿಗಳಿಗೆ ಎಐ ಮತ್ತು ಡಿಜಿಟಲ್ ಇಂಟೆಲಿಜೆನ್ಸ್ ಇನ್ನು ಮುಂದೆ ಕೇವಲ ಐಚ್ಛಿಕ ಸಾಧನಗಳಾಗಿ ಉಳಿದಿಲ್ಲ. ನೈಜ-ಸಮಯದ ಮೇಲ್ವಿಚಾರಣೆ, ಪ್ರಿಡಿಕ್ಟಿವ್ ಅನಾಲಿಟಿಕ್ಸ್ , ನೀರಿನ ಬೇಡಿಕೆಯ ಮುನ್ಸೂಚನೆ ಹಾಗೂ ದತ್ತಾಂಶ ಆಧಾರಿತ ಆಡಳಿತವು ಭವಿಷ್ಯದ ಜಲ ನಿರ್ವಹಣೆಯನ್ನು ನಿರ್ಧರಿಸಲಿವೆ, ಎಂದು ಹೇಳಿದರು.
ಕರ್ನಾಟಕವು ಈಗಾಗಲೇ ಎಐ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಿದೆ ಹಾಗೂ ಡಿಜಿಟಲ್ ಸಂಗ್ರಹಣೆ, ಡೇಟಾ ಹಂಚಿಕೆ ಮತ್ತು ಕಾರ್ಯಕ್ಷಮತೆ-ಆಧಾರಿತ ಆಡಳಿತ ವ್ಯವಸ್ಥೆಗಳನ್ನು ಬೆಂಬಲಿಸುವ ನೀತಿ ಚೌಕಟ್ಟುಗಳನ್ನು ಪರಿಚಯಿಸಿದೆ ಎಂದು ಅವರು ಉಲ್ಲೇಖಿಸಿದರು. ಡಿಜಿಟಲ್ ರೂಪಾಂತರದ ಕೇಂದ್ರಬಿಂದುವಾಗಿ ಹೊಣೆಗಾರಿಕೆಗೂ ಆದ್ಯತೆ ನೀಡಬೇಕು ಮುಖ್ಯ ಕಾರ್ಯದರ್ಶಿಗಳು ಕರೆ ನೀಡಿದರು.
ದತ್ತಾಂಶವು ಅಂತಿಮವಾಗಿ ಅಳೆಯಬಹುದಾದ ಆಡಳಿತಾತ್ಮಕ ಫಲಿತಾಂಶಗಳಿಗೆ ಕಾರಣವಾಗಬೇಕು. ತಂತ್ರಜ್ಞಾನವು ಸಾರ್ವಜನಿಕರ ವಿಶ್ವಾಸ ಮತ್ತು ಸಾಂಸ್ಥಿಕ ದಕ್ಷತೆಯನ್ನು ಬಲಪಡಿಸಬೇಕು ಎಂದು ತಿಳಿಸಿದರು.
