ಕನಕ ದರ್ಶನ ವಿಶೇಷ ಉಪನ್ಯಾಸ ಕಾರ್ಯಕ್ರಮ
ಶಹಾಪುರ: ಸಮಾಜ ಸುಧಾರಣೆಯಲ್ಲಿ ಮತ್ತು ಜನರಿಗೆ ಹೊಸ ವಿಚಾರ ತಿಳಿಸುವುದರಲ್ಲಿ ದಾಸಶ್ರೇಷ್ಠ ಕನಕದಾಸರು ಪ್ರಮುಖ ಪಾತ್ರ ವಹಿಸಿದ್ದು, ಅವರು ತೋರಿದ ಆದರ್ಶ, ತತ್ವ ಮತ್ತು ಸೌಹರ್ದವನ್ನು ನಾವು ಜೀವನದಲ್ಲಿ ಪರಿಪಾಲಿಸಬೇಕು, ಕನಕದಾಸರ ಕೀರ್ತನೆಗಳಲ್ಲಿ ಬದುಕಿನ ಪಾಠ ಇದೆ ಎಂದು ಪ್ರಗತಿಪರ ಚಿಂತಕರಾದ ಚೆನ್ನಪ್ಪ ಆನೆಗುಂದಿ ಹೇಳಿದರು.
ನಗರದ ಆರ್.ವಾಯ್ ದಿಗ್ಗಿ ಕಾಲೇಜಿನಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಕಾಗಿನೆಲೆ ಕಲಾನಿಕೇತನ ಟ್ರಸ್ಟ್ ಸಗರ ಸಹಯೋಗದಲ್ಲಿ ಕನ್ನಡದ ಸಂತ ಕವಿ ಕನಕದಾಸರ ಕುರಿತು ‘ಕನಕ ದರ್ಶನ’ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಮುಕ್ಕಣ್ಣ ಕರೇಗಾರ ಅವರು ಕನಕ ದರ್ಶನದಂತಹ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಕನಕದಾಸರು ಜೀವನ ಚರಿತ್ರೆಯ ಕುರಿತು ಜನರಲ್ಲಿ ಮನ ಮುಟ್ಟುವಂತೆ ತಿಳಿಸಲು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯವಾದದ್ದು, ಶತಮಾನಗಳ ಹಿಂದೆ ಕನಕದಾಸರು ಸಮಾನತೆ ಪ್ರತಿಪಾದಿಸಿದರು ಎಂದರು.
ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಅಯ್ಯಣ್ಣ ಇನಾಮದಾರ ಮಾತನಾಡಿ, ದಾಸರ ಪದ ಕೀರ್ತನೆ ಮತ್ತು ಗಾಯನದ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ ಕನಕದಾಸರು ಸಮಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿದರು. ದೌರ್ಜನ್ಯಕ್ಕೆ ಒಳಗಾದವರ ಮತ್ತು ದಮನಿತರ ಪರ ಹಲವು ಕೀರ್ತನೆಗಳನ್ನು ರಚಿಸಿದ ಕನಕದಾಸರು ಪ್ರೀತಿ, ವಿಶ್ವಾಸ ಮತ್ತು ನಂಬಿಕೆಯಿಂದ ಸಮಸಮಾಜ ನಿರ್ಮಾಣ ಸಾಧ್ಯ ಎಂಬ ಅಮೂಲ್ಯ ಸಂದೇಶ ನೀಡಿದ್ದನ್ನು ಮರೆಯಬಾರದು ಎಂದರು.
ಕನಕದಾಸರಂತ ಮಹಾನ್ ಪವಾಡ ಪುರುಷರು
ಯುವ ಪತ್ರಕರ್ತೆ ಸ್ವಾತಿ ಮೌರ್ಯ ದಾಸ ಸಾಹಿತ್ಯಕ್ಕೆ ಕನಕ ದಾಸರ ಕೊಡುಗೆ ಎನ್ನುವ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಕನಕದಾಸರಂತ ಮಹಾನ್ ಪವಾಡ ಪುರುಷ ಕನ್ನಡ ನಾಡಿನವರಾಗಿದ್ದು, ನಮ್ಮ ಅದೃಷ್ಠ. ಕುಲ ಜಾತಿಗಳ ಸಂಕೋಲೆಗಳನ್ನು ಕಿತ್ತು ದೇವರ ದೃಷ್ಠಿಯಲ್ಲಿ ಎಲ್ಲರೂ ಒಂದೇ ಎಂಬ ಸಂದೇಶ ಸಾರಿದ ಅವರು ಸಮ ಸಮಾಜದ ಬೋದನೆಗಳು ಆಧ್ಯಾತ್ಮೀಕ ಚಿಂತನೆಗಳು ಸಮಸ್ತ ಮನುಕುಲಕ್ಕೆ ಮಾರ್ಗದರ್ಶಕಗಳಾಗಿವೆ. ಇದನ್ನೂ ಓದಿ: ಬೆಂಗಳೂರಿನ ಸೂರ್ಯನಗರದಲ್ಲಿ ಪ್ರಗತಿಯ ಹೊಸ ಮೈಲಿಗಲ್ಲು: ಡಿಕೆಶಿ
ಶ್ರೀಕೃಷ್ಣನನ್ನು ಒಲಿಸಿಕೊಂಡ ದಾಸಶ್ರೇಷ್ಠರು ಕನ್ನಡ ಕಾವ್ಯ ಪರಂಪರೆಯ ಮೇರು ಶಿಖರವಾಗಿದ್ದಾರೆ. ದಾಸರ ಪದ ಮತ್ತು ಗಾಯನದ ಮೂಲಕ ಜೀವನ ಸಂದೇಶ ನೀಡಿದ ಕನಕದಾಸರ ವೈಚಾರಿಕ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತ. ಶತಮಾನಗಳು ಕಳೆದರು ಸಾಮಾಜಿಕ ವ್ಯವಸ್ಥೆಯಿಂದಾಗಿ ಹೆಚ್ಚಿನ ಬದಲಾವಣೆಗಳು ಆಗಿಲ್ಲಾ. ಕುಲಕುಲವೆಂದು ದ್ವೇಷ ಮೂಡಿಸಿಕೊಳ್ಳುವ ಬದಲು ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂಬ ಆಶಯ ಇದುವರೆಗೆ ಈಡೇರಿಲ್ಲ, ಅವರ ಇಚ್ಛೆ ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಯಬೇಕಿದೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಪಾಂಶುಪಾಲ ಸಾಸನೂರ, ಆರ್.ವಾಯ್ ದಿಗ್ಗಿ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಕುಮಾರ ದಿಗ್ಗಿ, ಕಲಾನಿಕೇತನ ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿಣ್ಣೂರ್, ಶಿಕ್ಷಕ ವರ್ಗದವರು, ವಿದ್ಯಾರ್ಥಿಗಳು ಇದ್ದರು.
