ಬೆಂಗಳೂರು: ಬೇಸಿಗೆ ಆಗಿರುವುದರಿಂದ ಇತ್ತೀಚೆಗೆ ನಗರದಲ್ಲಿ ಹೆಚ್ಚು ಬೆಂಕಿ ಅನಾಹುತಗಳು ನಡೆಯುತ್ತಿದ್ದು, ಇದೀಗ ಗಾಂಧಿನಗರ ವಿಧಾನಸಭಾ ಕ್ಷೇತ್ರದ ದತ್ತಾತ್ರೇಯ ವಾರ್ಡ್‌ನ ಮುನೇಶ್ವರ ಬ್ಲಾಕ್‌ನಲ್ಲಿ ವಾಸವಾಗಿರುವ ಗಣಪತಿ ಎಂಬುವವರ ಮನೆಗೆ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದ್ದು, ವಿಷಯ ತಿಳಿದ ತಕ್ಷಣ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ಭೇಟಿ ನೀಡಿ ಕುಟುಂಬಸ್ಥರ ಜೊತೆ ಮಾತನಾಡಿದ್ದಾರೆ.
ಬೆಂಕಿಯ ಕೆನ್ನಾಲಿಗೆಗೆ ಮನೆಯಲ್ಲಿದ್ದ ದಿನನಿತ್ಯದ ಬಳಕೆಯ ವಸ್ತುಗಳು ಹಾಗೂ ಪೀಠೋಪಕರಣಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಈ ಹಿನ್ನೆಲೆಯಲ್ಲಿ ಇಂದು ತಕ್ಷಣವೇ ಸಂತ್ರಸ್ತರ ಮನೆಗೆ ಖುದ್ದಾಗಿ ಭೇಟಿ ನೀಡಿ, ಪರಿಶೀಲನೆ ನಡೆಸಿ ನೊಂದ ಕುಟುಂಬಕ್ಕೆ ಧೈರ್ಯ ತುಂಬಿದರು.
ಸಂತ್ರಸ್ತ ಕುಟುಂಬವು ಬೀದಿಗೆ ಬೀಳದಂತೆ ಸದ್ಯದ ತುರ್ತು ಪರಿಹಾರವಾಗಿ ಒಂದು ರಕ್ಷಣಾತ್ಮಕ ವ್ಯವಸ್ಥೆ ಮಾಡಲಾಗಿದೆ. ಸದ್ಯದ ಪರಿಸ್ಥಿತಿಯನ್ನು ನಿಭಾಯಿಸಲು ಮುಂದಿನ ಒಂದೆರಡು ದಿನಗಳಲ್ಲಿ ಮನೆಯ ಮೇಲ್ಚಾವಣಿಗೆ ಶೀಟ್‌ಗಳನ್ನು ಅಳವಡಿಸಿಕೊಡುವ ಮೂಲಕ ಅವರ ದಿನನಿತ್ಯದ ಬದುಕಿಗೆ ತಾತ್ಕಾಲಿಕ ನೆರವು ನೀಡಲಾಗಿದೆ. ಇದರ ಜೊತೆಗೆ ತಕ್ಷಣದ ಅವಶ್ಯಕ ವಸ್ತುಗಳ ಖರೀದಿಗಾಗಿ ವೈಯಕ್ತಿಕವಾಗಿ ಧನಸಹಾಯವನ್ನು ಒದಗಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: 6,000 ಕೋಟಿ ಹೂಡಿಕೆಗೆ ಆ್ಯಕ್ಸಿಸ್‌ಕೇಡ್ಸ್ ಏರೊಸ್ಪೇಸ್ ಒಲವು: ಎಂಬಿ ಪಾಟೀಲ
ಇನ್ನು ಅಗ್ನಿ ಅವಘಡದಿಂದ ಸರ್ವಸ್ವವನ್ನೂ ಕಳೆದುಕೊಂಡಿರುವ ಗಣಪತಿ ಅವರ ಕುಟುಂಬಕ್ಕೆ ಸಂಪೂರ್ಣವಾಗಿ ಹೊಸ ಮನೆ ಮರುನಿರ್ಮಾಣ ಮಾಡಿಕೊಡುವ ಭರವಸೆಯನ್ನು ನೀಡಿದ್ದೇನೆ. ಮುಂಬರುವ ದಿನಗಳಲ್ಲಿ ಸರ್ಕಾರದಿಂದ ದೊರೆಯುವ ‘ಒಂಟಿ ಮನೆ ಯೋಜನೆ’ಯ ಅಡಿಯಲ್ಲಿ ಅತ್ಯಂತ ಶೀಘ್ರದಲ್ಲೇ ಅವರಿಗೆ ನೂತನ ಸುಸಜ್ಜಿತ ಮನೆಯನ್ನು ನಿರ್ಮಿಸಿಕೊಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
