ಬೆಂಗಳೂರು: ಬೆಂಗಳೂರು ನಗರವನ್ನ ಇನ್ನಷ್ಟು ಅಭಿವೃದ್ಧಿ ಮಾಡಲು ರಾಜ್ಯ ಸರ್ಕಾರವು ಮಹತ್ವದ ಕಾರ್ಯಗಳನ್ನು ಕೈಗೊಂಡಿದ್ದು ಇದೀಗ ಬಿಡದಿ ಟೌನ್ ಶಿಪ್ ಮಾಡಲು ನಿರ್ಧರಿಸಿದ್ದು, ಸುಮಾರು 80% ನಷ್ಟು ರೈತರು ಒಪ್ಪಿಗೆ ನೀಡಿದ್ದು, ಜೂನ್ ಮೊದಲ ವಾರದ ಒಳಗಾಗಿ ಪರಿಹಾರ ವಿತರಣಾ ಆರಂಭವಾಗಲಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಕುಮಾರಪಾರ್ಕ್ ನ ಸರ್ಕಾರಿ ಗೃಹ ಕಚೇರಿಯಲ್ಲಿ ಇಂದು (ಬುಧವಾರ ಮೇ. 20) ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ಸಂಬಂಧ ಬಿಡದಿ ರೈತ ಪ್ರತಿನಿಧಿಗಳ ಜೊತೆ ಸಮಾಲೋಚನೆ ನಡೆಸಿ ಮಾತನಾಡಿದ ಅವರು, ಜೆಡಿಎಸ್ ನಾಯಕರೊಂದಿಗೆ ಅವರು ಆಯ್ಕೆ ಮಾಡಿದ ಯಾವುದೇ ಸ್ಥಳ ಮತ್ತು ಸಮಯದಲ್ಲಿ ಸಾರ್ವಜನಿಕ ಚರ್ಚೆಗೆ ಸಿದ್ಧನಿದ್ದೇನೆ ಎಂದು ಡಿಸಿಎಂ ಸವಾಲು ಹಾಕಿದರು.
ನಮ್ಮ ಗ್ರೇಟರ್ ಬೆಂಗಳೂರು ಟೌನ್‌ಶಿಪ್ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲಾ ರೈತರು ಬಂದಿದ್ದರು. ಅವರಿಗೆ ಪರಿಹಾರದ ಕುರಿತು ನಾನು ಈಗಾಗಲೇ ಘೋಷಣೆ ಮಾಡಿದ್ದೇನೆ. ಹೆಚ್ಚು ಕಡಿಮೆ ಶೇ. 80 ರಷ್ಟು ರೈತರು ಬಂದು ತಮ್ಮ ಒಪ್ಪಿಗೆ ನೀಡಿದ್ದಾರೆ. ಪರಿಹಾರವನ್ನು ಆದಷ್ಟು ಬೇಗ ಬಿಡುಗಡೆ ಮಾಡುವಂತೆ ಅವರು ನಮ್ಮನ್ನು ಒತ್ತಾಯಿಸಿದರು ಎಂದು ಹೇಳಿದರು. ಇದನ್ನೂ ಓದಿ: ತಮಿಳುನಾಡಿನಲ್ಲಿ ಸಿಎಂ ವಿಜಯ್ ಅವರಿಗೆ ಆರಂಭದಲ್ಲೇ ಆತಂಕ!
ಮೂರು ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಮತ್ತು ಜೂನ್ ಮೊದಲ ವಾರದಿಂದ, ನಾವು ಅವರೆಲ್ಲರಿಗೂ ಪರಿಹಾರವನ್ನು ಬಿಡುಗಡೆ ಮಾಡಲು ಪ್ರಾರಂಭಿಸುತ್ತೇವೆ ಎಂದು ತಿಳಿಸಿದರು.
ಟೌನ್‌ಶಿಪ್ ಯೋಜನೆ ಬಗ್ಗೆ ಸರ್ಕಾರ ಪ್ರಕಟಿಸಿರುವ ಪರಿಹಾರ ಕ್ರಮಗಳು ಮತ್ತು ಭೂಮಿ ಸ್ವಾಧೀನ ಪ್ರಕ್ರಿಯೆ ಕುರಿತು ರೈತರಿಗೆ ವಿವರ ನೀಡಲಾಗಿದ್ದು, ಅವರು ಅದನ್ನು ಒಪ್ಪಿಕೊಂಡಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ.
