ಬೆಂಗಳೂರು: ಕಾಂಗ್ರೆಸ್ ಸರ್ಕಾರವು ಪಕ್ಷದ ಮೂರು ವರ್ಷದ ಸಾಧನಾ ಸಮಾರಂಭವನ್ನು ಕಲ್ಪತರು ನಾಡು ತುಮಕೂರಿನಲ್ಲಿ ಅದ್ದೂರಿಯಾಗಿ ಸಾಧನ ಸಮಾವೇಶವನ್ನು ಕೈಗೊಂಡಿದ್ದಾರೆ.
ಇನ್ನು ಯಾವ ಪುರುಷಾರ್ಥಕ್ಕೆ ಸಾಧನ ಸಮಾವೇಶ ಹಮ್ಮಿಕೊಂಡಿದ್ದಾರೆ? ಇವರಿಗೆ ಬೆಂಗಳೂರು ನಗರದಲ್ಲಿರುವ ಗುಂಡಿಗಳನ್ನ ಮುಚ್ಚಲು ಯೋಗ್ಯತೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು (ಮಂಗಳವಾರ ಮೇ 19) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇವರ ಯೋಗ್ಯತೆಗೆ ಬೆಂಗಳೂರು ಮಹಾನಗರದ ರಸ್ತೆ ಗುಂಡಿಗಳನ್ನು ಮುಚ್ಚಲು ಸಾಧ್ಯ ಆಗುತ್ತಿಲ್ಲ. ಕೃಷಿ ಕ್ಷೇತ್ರದ ಬಗ್ಗೆ ಈ ಸರಕಾರ ಕಿಂಚಿತ್ತೂ ತಲೆ ಕೆಡಿಸಿಕೊಂಡಿಲ್ಲ. ಸಂಕಷ್ಟದಲ್ಲಿ ಇರುವ ರೈತರಿಗೆ ಸಾಂತ್ವನ ಹೇಳುವ ಸಂವೇದನೆ ಕೂಡ ಈ ಕಾಂಗ್ರೆಸ್ ಸರಕಾರಕ್ಕೆ ಇಲ್ಲ ಎಂಬುದು ದುರ್ದೈವ ಎಂದು ಟೀಕಿಸಿದರು.
ಸಿಎಂ ರಾಜೀನಾಮೆ ಕೊಡಬೇಕಿತ್ತು
ಉದ್ಯೋಗ ಸೃಷ್ಟಿ ಕುರಿತು ಸಾಕಷ್ಟು ಮಾತನಾಡುತ್ತಾರೆ. ಯುವಜನತೆ ಜೀವನದ ಜೊತೆ ಚೆಲ್ಲಾಟ ಆಡುವ ಕಾಂಗ್ರೆಸ್ ಸರಕಾರದ ಅಹಿಂದ ಮುಖವಾಡವೂ ಕಳಚಿಬಿದ್ದಿದೆ ಎಂದು ನುಡಿದರು. ಭ್ರಷ್ಟಾಚಾರರಹಿತ ಆಡಳಿತ ನೀಡುವುದಾಗಿ ಹಲವಾರು ಬಾರಿ ಹೇಳಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಆದಾಗಲೇ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕಾಗಿತ್ತು. ಈ ಹಗರಣದ ಕುರಿತು ಸದನದಲ್ಲೇ ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದು, ಸಚಿವರು ರಾಜೀನಾಮೆ ಕೊಟ್ಟಿದ್ದನ್ನು ನೆನಪಿಸಿದರು. ಮತ್ತೊಂದು ಕಡೆ ‘ಮುಡಾ’ ಹಗರಣ ನಡೆದಿದೆ. 14 ನಿವೇಶನ ವಾಪಸ್ ಮಾಡಿದ್ದು ರಾಜ್ಯದ ಜನರಿಗೆ ಗೊತ್ತಿದೆ ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಈ ಥರದ ಶಿಕ್ಷಣ ಸಚಿವರು ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಬಂದಿದ್ದಾರೆ ಎಂದು ಟೀಕಿಸಿದರು. ರಾಜ್ಯ ಶಿಕ್ಷಣ ನೀತಿಯನ್ನು ತರಲು ಇವರಿಗೆ ಸಾಧ್ಯವಾಗಿಲ್ಲ; ರಾಷ್ಟ್ರೀಯ ಶಿಕ್ಷಣ ನೀತಿಯನ್ನೂ (ಎನ್ಇಪಿ) ಅನುಷ್ಠಾನ ಮಾಡುತ್ತಿಲ್ಲ. ಶಿಕ್ಷಣ ಕ್ಷೇತ್ರದಲ್ಲೂ ಗೊಂದಲ ಸೃಷ್ಟಿಸಿ ರಾಜ್ಯದ ಮಕ್ಕಳ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ದೂರಿದರು. ರಾಜ್ಯದಲ್ಲಿ 40 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಗಮನ ಸೆಳೆದರು. ಇದನ್ನೂ ಓದಿ: ಕಾಂಗ್ರೆಸ್ ಗೆಲುವಿನ ನಾಗಾಲೋಟ ಬಹಳ ದಿನ ನಡೆಯದು: ಬಿವೈವಿ
ರಾಜ್ಯ ಸರಕಾರದ ಎಡವಟ್ಟಿನಿಂದಾಗಿ 6500 ಗ್ರಾಮೀಣ ಗ್ರಂಥಾಲಯಗಳು ಬಾಗಿಲು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿಗಳ ಜಿಲ್ಲೆಯಲ್ಲೇ ಮೂಲಭೂತ ಸೌಕರ್ಯ ಕೊರತೆಯಿಂದ 15 ತಿಂಗಳಿನಿಂದ 550ಕ್ಕೂ ಹೆಚ್ಚು ನವಜಾತ ಶಿಶುಗಳು ಮರಣ ಹೊಂದಿವೆ. ಗರ್ಭಿಣಿಯರು, ಬಾಣಂತಿಯರ ಸರಣಿ ಸಾವುಗಳು ಸಂಭವಿಸುತ್ತಿವೆ. ಕಾನೂನು- ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ದಿನ ಬೆಳಗಾದರೆ ಕೊಲೆಗಳು ನಡೆಯುತ್ತಿವೆ. ಮುಖ್ಯಮಂತ್ರಿಗಳ ಜಿಲ್ಲೆಯು ಡ್ರಗ್ ಮಾಫಿಯಕ್ಕೆ ಇವತ್ತು ಕೇಂದ್ರವಾಗಿದೆ. ಮಾದಕವಸ್ತು ಉತ್ಪಾದನಾ ಫ್ಯಾಕ್ಟರಿಗಳು ಇರುವುದು ಪತ್ತೆಯಾಗಿದೆ ಎಂದು ವಿವರಿಸಿದರು. ಪೊಲೀಸ್ ಇಲಾಖೆ, ಮುಖ್ಯಮಂತ್ರಿಗಳಿಗೆ ಅವರ ಜಿಲ್ಲೆಯಲ್ಲಿ ಏನು ನಡೆಯುತ್ತಿದೆ ಎಂಬುದರ ಅಂದಾಜಿಲ್ಲ ಎಂದು ಟೀಕಿಸಿದರು.
