ಬೆಂಗಳೂರು: ನನ್ನ ಇ-ಖಾತಾ, ನನ್ನ ಹಕ್ಕು ಅಭಿಯಾನದಿಂದ ಬೆಂಗಳೂರಿನ ಸಾರ್ವಜನಿಕರು ಒಂದೇ ಒಂದು ರೂಪಾಯಿ ಲಂಚ ನೀಡದೆ ತಮ್ಮ ಆಸ್ತಿಗಳನ್ನು ‘ಬಿ’ ಖಾತೆಯಿಂದ ‘ಎ’ ಖಾತೆಗೆ ಪರಿವರ್ತನೆ ಹಾಗೂ ಮನೆ ಬಾಗಿಲಲ್ಲೇ ಇ-ಖಾತೆ ಪಡೆಯಬಹುದು. ಏಳು ಲಕ್ಷ ಜನರಿಗೆ ಇದರಿಂದ ಉಪಯೋಗವಾಗಲಿದೆ. ಬೆಂಗಳೂರು ನಿವಾಸಿಗಳು, ಅರ್ಜಿದಾರರು ಈ ಅಭಿಯಾನದಿಂದ ಖುಷಿಯಾಗಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಹೊರಮಾವಿನ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಶನಿವಾರ ಆರಂಭವಾದ “ನನ್ನ ಇ-ಖಾತಾ, ನನ್ನ ಹಕ್ಕು” ಅಭಿಯಾನ ಕೇಂದ್ರಕ್ಕೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಶಿವಕುಮಾರ್ ರವರು ಭೇಟಿ ನೀಡಿ, ಪ್ರಕ್ರಿಯೆಯನ್ನು ಪರಿಶೀಲಿಸಿದರು. ನಂತರ ನಾಗರಿಕರ ಅಹವಾಲು ಆಲಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಖಾತೆ ದಾಖಲೆಯಲ್ಲಿ ಫೋಟೋ ಸಹ ಇರಲಿದೆ. ಯಾರಾದರೂ ನಕಲಿ ದಾಖಲೆಗಳನ್ನು ನೀಡಿ ಖಾತೆ ಮಾಡಿಸಿಕೊಂಡರೆ ಅದನ್ನು ರದ್ದು ಮಾಡುವ ವ್ಯವಸ್ಥೆಯೂ ಇದೆ. ನಿಗದಿತ ನಂಬರ್ ನೀಡಿದ ತಕ್ಷಣ 2004 ರ ನಂತರದ ಎಲ್ಲಾ ದಾಖಲೆಗಳು ದೊರೆಯುತ್ತವೆ. ಸಬ್ ರಿಜಿಸ್ಟ್ರಾರ್ ಕಚೇರಿಗೆ ಲಿಂಕ್ ಮಾಡಲಾಗಿದೆ. ಅರ್ಹ ಮಾಲೀಕರಿಗೆ ಖಾತೆ ಮಾಡಿಕೊಡಲಾಗುವುದು ಎಂದರು.
ಪ್ರತಿ ಶನಿವಾರ ನನ್ನ ಇ- ಖಾತೆ ಅಭಿಯಾನ
ನಿಮ್ಮ ಆಸ್ತಿ ಮೌಲ್ಯಗಳನ್ನು ಹೆಚ್ಚಳ ಮಾಡಲು ಬಿ ಖಾತೆಯಿಂದ ಎ ಖಾತೆಗೆ ಪರಿವರ್ತನೆ ಮಾಡಿಕೊಡಲಾಗುತ್ತಿದೆ. ಇದು ಐತಿಹಾಸಿಕ ತೀರ್ಮಾನ. ಇದರಿಂದ ನೀವು ಬ್ಯಾಂಕ್ ನಲ್ಲಿ ಸಾಲ ಪಡೆಯಬಹುದು ಹಾಗೂ ಇತರೇ ಸೌಲಭ್ಯಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಬೆಂಗಳೂರಿನಲ್ಲಿರುವ 23 ಲಕ್ಷ ಆಸ್ತಿಗಳಲ್ಲಿ 16 ಲಕ್ಷ ಎ ಖಾತೆಗಳಿದ್ದರೆ 7 ಲಕ್ಷ ಬಿ ಖಾತೆಗಳಿವೆ. ಕೆಳ ಮಟ್ಟದ ಅಧಿಕಾರಿಗಳು ಖಾತೆ ವಿಚಾರವಾಗಿ ಲಂಚ ಪಡೆದು ಕಿರುಕುಳ ನೀಡುತ್ತಿದ್ದರು ಎನ್ನುವುದು ನನ್ನ ಗಮನಕ್ಕೆ ಬಂದಿತ್ತು. ಅದಕ್ಕಾಗಿ ಪ್ರತಿ ಶನಿವಾರ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕುಮಾರಸ್ವಾಮಿ ಅವರಿಗೆ ಅಸೂಯೆ, ಹೊಟ್ಟೆಯುರಿ: ಡಿ.ಕೆ. ಶಿವಕುಮಾರ್
“ದಲ್ಲಾಳಿಗಳನ್ನು ದೂರ ಇಡಬೇಕು. ಯಾವ ಅಧಿಕಾರಿಗಳು ಲಂಚ ಕೇಳಿದರೆ ದೂರು ನೀಡುವ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ನಿರ್ದಿಷ್ಟ ದೂರವಾಣಿ ಸಂಖ್ಯೆ ನೀಡಲಾಗುವುದು. ಲಂಚ ಕೇಳಿದ್ದರ ದೂರು ನೀಡಬಹುದು. ಅಂತಹವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು” ಎಂದರು.
