ಬೆಂಗಳೂರು: ರಾಜ್ಯ ಸರ್ಕಾರವು ಶಾಲಾ-ಕಾಲೇಜುಗಳಲ್ಲಿ ಹಿಜಾಬ್, ಜನಿವಾರ ಸೇರಿದಂತೆ ಉಡುಗೆ-ತೊಡುಗೆಗಳಿಗೆ ಅವಕಾಶ ನೀಡಿರುವುದಕ್ಕೆ ಒಂದು ಕಡೆ ವಿರೋಧ ಪಕ್ಷದ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಕೆಂಡಮಂಡಲವಾಗಿದ್ದಾರೆ.
ಇನ್ನೊಂದು ಕಡೆ ಸರ್ಕಾರದ ತೀರ್ಮಾನವನ್ನು ಬೆಂಬಲಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಹೌದು, ರಾಜ್ಯ ಸರ್ಕಾರವು ಶಾಲಾ-ಕಾಲೇಜುಗಳಲ್ಲಿ ಸಾಂಪ್ರದಾಯಿಕ ಅವರ ಧರ್ಮಕ್ಕೆ ಸಂಬಂಧಿಸಿದಂತೆ ಉಡುಗೆ-ತೊಡುಗೆಗಳಿಗೆ ಅವಕಾಶ ನೀಡಿದ್ದು ಇಂದು (ಶನಿವಾರ ಮೇ. 16) ಸಿಖ್ ಸಮುದಾಯದ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಧನ್ಯವಾದ ತಿಳಿಸಿದರು. ಇದನ್ನೂ ಓದಿ: ಇಂದಿನಿಂದ ಇ-ಖಾತಾ ಮೇಳ ಆರಂಭ
ರಾಜ್ಯ ಸರ್ಕಾರವು ಸೀಮಿತ ಸಾಂಪ್ರದಾಯಿಕ ಅಥವಾ ನಂಬಿಕೆ ಆಧಾರಿತ ಆಚರಣೆಗಳನ್ನು ಶಿಕ್ಷಣ ಸಂಸ್ಥೆಗಳಲ್ಲಿ ಧರಿಸಲು ಅವಕಾಶ ನೀಡಿ ಆದೇಶಿಸಿದ್ದರಿಂದ ಸಿಖ್ ಧರ್ಮದ ವಿದ್ಯಾರ್ಥಿಗಳಿಗೆ ಟರ್ಬನ್ ಧರಿಸಲು ಅವಕಾಶ ದೊರೆತಿದೆ. ನಾಡನ್ನು ಸರ್ವಜನಾಂಗದ ಶಾಂತಿಯ ತೋಟವಾಗಿಸುತ್ತೇವೆ ಎಂಬ ನಮ್ಮ ಸಂಕಲ್ಪ ಬರಿ ಬಾಯಿ ಮಾತಿನದ್ದಲ್ಲ, ಸರ್ವಧರ್ಮಗಳ ಧಾರ್ಮಿಕ ನಂಬಿಕೆಗೆ ಸಮಾನ ಗೌರವ ಸಲ್ಲಿಸುವ ಮೂಲಕ ಅಕ್ಷರಶಃ ನಮ್ಮ ಮಾತಿಗೆ ಬದ್ಧರಾಗಿ ನಡೆಯುತ್ತಿದ್ದೇವೆ ಎಂದರು.
