ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ವಾಹನ ಸಂಚಾರ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ಪ್ರತಿನಿತ್ಯ ಪ್ರಯಾಣ ಮಾಡಲು 5 ನಿಮಿಷದ ಪ್ರಯಾಣವನ್ನು ಸುಮಾರು 20ರಿಂದ 30 ನಿಮಿಷ ಪ್ರಯಾಣಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಬೆಂಗಳೂರು ಸಂಚಾರ ದಟ್ಟಣೆಯನ್ನು ನಿವಾರಿಸಲು ನಮ್ಮ ಮೆಟ್ರೋ ಇದೀಗ ಮಹತ್ವದ ಹೆಜ್ಜೆಯನ್ನು ಇಟ್ಟಿದ್ದು, ಜೂನ್ ತಿಂಗಳ ಒಳಗಾಗಿ ಪಿಂಕ್ ಲೈನ್ ಮೆಟ್ರೋ ರಂಭಿಸಲು ಬಿಎಂಆರ್‌ಪಿಎಲ್ ತಿಳಿಸಿದೆ
ಹೌದು, ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ ಪಿಂಕ್ ಲೈನ್ ಮೆಟ್ರೋ ಮಾರ್ಗವನ್ನು ಶೀಘ್ರದಲ್ಲೇ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲು ಸಿದ್ಧತೆಗಳು ನಡೆಯುತ್ತಿವೆ.
ಈ ಮಾರ್ಗದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಜೂನ್ ತಿಂಗಳಲ್ಲಿ 6 ಎಲಿವೇಟೆಡ್ ಮೆಟ್ರೋ ನಿಲ್ದಾಣಗಳನ್ನು ಪ್ರಯಾಣಿಕರಿಗಾಗಿ ಆರಂಭಿಸುವ ಯೋಜನೆ ರೂಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರ ಜೊತೆಗೆ, ಈ ಮಾರ್ಗವನ್ನು ಇನ್ನಷ್ಟು ವಿಸ್ತರಿಸುವ ಮೂಲಕ ನಗರದ ಅತಿ ಉದ್ದದ ಮೆಟ್ರೋ ಕಾರಿಡಾರ್ ನಿರ್ಮಿಸಲು BMRCL ಮುಂದಾಗಿದೆ. ಕಾಡುಗೋಡಿ ಟ್ರೀ ಪಾರ್ಕ್ ವರೆಗೆ ವಿಸ್ತರಣೆ ಮಾಡುವ ಯೋಜನೆಗೆ ಈಗಾಗಲೇ ಸಾಧ್ಯತಾ ಅಧ್ಯಯನ (ಫೀಸಿಬಿಲಿಟಿ ಟೆಸ್ಟ್) ಪೂರ್ಣಗೊಂಡಿದ್ದು, ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ.
ವಿಸ್ತರಣೆ ಯೋಜನೆಯಡಿ ಕಾಳೇನ ಅಗ್ರಹಾರ, ಜಿಗಣಿ, ಆನೇಕಲ್, ಅತ್ತಿಬೆಲೆ, ಸರ್ಜಾಪುರ, ವರ್ತೂರು ಹಾಗೂ ಕಾಡುಗೋಡಿ ಟ್ರೀ ಪಾರ್ಕ್ ಸೇರಿದಂತೆ ಸುಮಾರು 73 ಕಿ.ಮೀ ವ್ಯಾಪ್ತಿಯಲ್ಲಿ ಮಾರ್ಗ ನಿರ್ಮಾಣವಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಬೋವಿ ಶ್ರೀಗಳ ಭೇಟಿ ಮಾಡಿದ ಬಿವೈವಿ
ಈ ಯೋಜನೆ ಜಾರಿಗೆ ಬಂದರೆ ನಗರದಲ್ಲಿ ಟ್ರಾಫಿಕ್ ದಟ್ಟಣೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಪ್ರಯಾಣಿಕರು ಹಾಗೂ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
