ಬೆಂಗಳೂರು: ಯಾವುದೇ ಪ್ರಕರಣ ಇರಬಹುದು ಮಹಿಳೆಯರನ್ನ ರಾತ್ರಿ ವೇಳೆ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸುವಂತಿಲ್ಲ ಎಂದು ರಾಜ್ಯ ಪೊಲೀಸ್ ಇಲಾಖೆಯ ಮುಖ್ಯಸ್ಥರ ಕಚೇರಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಹೌದು, ರಾಜ್ಯದಲ್ಲಿ ಯಾವುದೇ ಪೊಲೀಸ್ ಠಾಣೆ ಇರಬಹುದು ರಾತ್ರಿ ಹೊತ್ತಿನಲ್ಲಿ ಮಹಿಳೆಯರನ್ನ ಪೊಲೀಸ್ ಠಾಣೆಗೆ ಕರೆತಂದು ಅವರನ್ನು ವಿಚಾರಣೆ ನಡೆಸುವುದು ಮತ್ತು ಇನ್ನಿತರ ವೈದ್ಯಕೀಯ ಪರೀಕ್ಷೆ ಹಾಗೂ ಇನ್ನಿತರ ತನಿಖೆಗಳನ್ನು ನಡೆಸಬಾರದು ಎಂದು ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ. ಮಹಿಳೆಯರ ಸುರಕ್ಷತೆ ಮತ್ತು ಹಕ್ಕುಗಳ ರಕ್ಷಣೆಯ ಕುರಿತಾಗಿ ಈ ಆದೇಶವನ್ನು ಹೊರಡಿಸಲಾಗಿದೆ. ಇದನ್ನೂ ಓದಿ: ವಿಶ್ವ ಮಹಿಳಾ ಟೆನ್ನಿಸ್ ಟೂರ್ನಿಗೆ ಜಿ ಪರಮೇಶ್ವರ್ ಚಾಲನೆ
ಈ ಸಂಬಂಧ ರೈಲ್ವೆ ಮತ್ತು ಕೆಜಿಎಫ್ ಸೇರಿದಂತೆ ರಾಜ್ಯದ ಎಲ್ಲಾ ಪೊಲೀಸ್ ಆಯುಕ್ತರು, ರೇಂಜ್ ಇನ್ಸ್ಪೆಕ್ಟರ್ ಜನರಲ್ಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸುತ್ತೋಲೆ ಜಾರಿಗೊಳಿಸಲಾಗಿದೆ. ಅನಿವಾರ್ಯ ಅಥವಾ ತುರ್ತು ಪರಿಸ್ಥಿತಿಗಳಲ್ಲಿ ರಾತ್ರಿ ವೇಳೆ ವಿಚಾರಣೆ ನಡೆಸಬೇಕಾದ ಪರಿಸ್ಥಿತಿ ಎದುರಾದರೆ, ಮಹಿಳಾ ಪೊಲೀಸ್ ಅಧಿಕಾರಿಯ ಉಪಸ್ಥಿತಿ ಕಡ್ಡಾಯವಾಗಿರಬೇಕು ಎಂದು ಸ್ಪಷ್ಟಪಡಿಸಲಾಗಿದೆ.
