ತುಮಕೂರು: ತುಮಕೂರು ಜಿಲ್ಲಾಡಳಿತ, ತುಮಕೂರು ಟೆನಿಸ್ ಅಸೋಸಿಯೇಷನ್ ಹಾಗೂ ಕರ್ನಾಟಕ ಲಾನ್ ಟೆನಿಸ್ ಅಸೋಸಿಯೇಷನ್ ಸಹಯೋಗದಲ್ಲಿ ತುಮಕೂರಿನಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಆಯೋಜಿಸಿರುವ ಅಂತಾರಾಷ್ಟ್ರೀಯ ಮಹಿಳಾ ಒಪನ್ ಟೆನ್ನಿಸ್ ಕ್ರೀಡಾಕೂಟ ತುಮಕೂರು ಓಪನ್’ ಐಟಿಎಫ್ಡಬ್ಲ್ಯೂ35 ವಿಶ್ವ ಮಹಿಳಾ ಟೆನ್ನಿಸ್ ಟೂರ್ನಿಗೆ ಗೃಹ ಸಚಿವ ಜಿ ಪರಮೇಶ್ವರ್ ಅವರು ಚಾಲನೆ ನೀಡಿ, ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ತುಮಕೂರು ಜಿಲ್ಲೆಯನ್ನು ಕ್ರೀಡೆಯಲ್ಲೂ ವಿಶ್ವದರ್ಜೆ ಮಟ್ಟಕ್ಕೆ ಕೊಂಡೊಯ್ಯುವುದು ನಮ್ಮ ಕನಸು. ರಾಜ್ಯ ಮತ್ತು ದೇಶದಲ್ಲಿ ತುಮಕೂರು ನಗರ ಕ್ರೀಡಾನಗರಿಯಾಗಿ ಅಭಿವೃದ್ಧಿ ಹೊಂದಬೇಕು ಎಂಬ ಉದ್ದೇಶದಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ. ಕ್ರೀಡೆಗೆ ಅಗತ್ಯವಾಗಿ ಬೇಕಾಗಿರುವ ಕ್ರೀಡಾಂಗಣ ಸೇರಿದಂತೆ ಎಲ್ಲ ಮೂಲಸೌಕರ್ಯಗಳನ್ನು ಒದಗಿಸುವ ಕೆಲಸ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ನಾಯಕತ್ವ ಬದಲಾವಣೆ ಕುರಿತು ಆರ್ಬಿ ತಿಮ್ಮಾಪುರ್ ಮಹತ್ವದ ಹೇಳಿಕೆ!
ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಹಾಕಿ ಸ್ಟೇಡಿಯಂ, ಈಜು ಕೊಳ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ. ಅಮಾನಿಕೆರೆಯಲ್ಲಿ ಕಯಾಕಿಂಗ್ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ. ಕೆ.ಗೋವಿಂದರಾಜು, ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್ ಗೌಡ, ಸಿ.ಬಿ.ಸುರೇಶ್ ಬಾಬು, ತುಮಕೂರು ವಿವಿ ಕುಲಪತಿ ಪ್ರೊ. ಎಂ.ವೆಂಕಟೇಶ್ವರಲು, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಬಿ.ವಿ.ಅಶ್ವಿಜ, ನಿವೃತ್ತ ಐಎಎಸ್ ಅಧಿಕಾರಿ ದ್ಯಾಬೇರಿ ಹಾಗೂ ಅಖಿಲ ಬಾಬರತ ಟೆನ್ನಿಸ್ ಅಸೋಸಿಯೇಷನ್ ಪದಾಧಿಕಾರಿಗಳು ಮುಂತಾದವರು ಇದ್ದರು.
