ಬೆಂಗಳೂರು: ಸುಮಾರು 50 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷವು ಅಧಿಕಾರಕ್ಕೆ ಏರಲು ತಯಾರಿ ನಡೆಸಿದ್ದು, ಇದು ಒಳಸಂಚಿನ ಮೋಸ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಅವರು, ಬಿಜೆಪಿಯು ಮತ ಎಣಿಕೆಯಲ್ಲಿ ಗೊಂದಲವನ್ನು ಸೃಷ್ಟಿಸುತ್ತಿದೆ ಹಾಗಾಗಿ ಸೂರ್ಯ ಮುಳುಗುವುದರ ಒಳಗಾಗಿ ನಾವೇ ಗೆಲ್ಲುತ್ತೇವೆ ಎಂದು ಬೆಂಬಲಿಗರಿಗೆ ಮಮತಾ ಬ್ಯಾನರ್ಜಿಯವರು ಹೇಳಿದ್ದಾರೆ.
ಇನ್ನು ಎಣಿಕೆ ಕೇಂದ್ರದಿಂದ ಯಾರೂ ಹೊರಬರಬೇಡಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ನಮ್ಮ ಎಲ್ಲಾ ಮತ ಎಣಿಕೆ ಏಜೆಂಟ್ಗಳು ಮತ್ತು ಅಭ್ಯರ್ಥಿಗಳಲ್ಲಿ ನನ್ನದೊಂದು ವಿನಂತಿ, ಯಾರೂ ಎಣಿಕೆ ಕೇಂದ್ರದಿಂದ ಹೊರಬರಬೇಡಿ. ಇದು ಬಿಜೆಪಿಯ ಯೋಜನೆಯಾಗಿದೆ. ನಿನ್ನೆಯಿಂದಲೇ ನಾನು ಹೇಳುತ್ತಿದ್ದಂತೆ, ಅವರು ಮೊದಲ 2-3 ಸುತ್ತುಗಳಲ್ಲಿ ತಮ್ಮ ಫಲಿತಾಂಶಗಳನ್ನು ಮೊದಲು ತೋರಿಸುತ್ತಾರೆ ಮತ್ತು ನಮ್ಮದನ್ನು ಆಮೇಲೆ ತೋರಿಸುತ್ತಾರೆ. ಸುಮಾರು 100 ಕಡೆಗಳಲ್ಲಿ ಎರಡು-ಮೂರು ಸುತ್ತುಗಳ ನಂತರ ಎಣಿಕೆಯನ್ನು ನಿಲ್ಲಿಸಲಾಗಿದೆ. ಕೇಂದ್ರ ಪಡೆಗಳನ್ನು ಬಳಸಿ ತೃಣಮೂಲ ಕಾಂಗ್ರೆಸ್ ಅನ್ನು ಎಲ್ಲೆಡೆ ಹತ್ತಿಕ್ಕಲಾಗುತ್ತಿದೆ, ಕಚೇರಿಗಳನ್ನು ಧ್ವಂಸಗೊಳಿಸಲಾಗುತ್ತಿದೆ ಮತ್ತು ಬಲವಂತವಾಗಿ ವಶಪಡಿಸಿಕೊಳ್ಳಲಾಗುತ್ತಿದೆ. ಇದನ್ನೂ ಓದಿ: ವಿಜಯ್ ಗೆಲುವಿನ ಕುರಿತು ಡಿಕೆ ಶಿವಕುಮಾರ್ ಹೇಳಿದ್ದೇನು?
ಅವರು ಸಂಪೂರ್ಣ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ನಾವು ಮುನ್ನಡೆಯಲ್ಲಿದ್ದರೂ ಅದನ್ನು ವರದಿ ಮಾಡುತ್ತಿಲ್ಲ. ಚುನಾವಣಾ ಆಯೋಗವು ಕೇಂದ್ರ ಪಡೆಗಳೊಂದಿಗೆ ಸೇರಿ ತನ್ನ ಇಚ್ಛೆಯಂತೆ ಆಡುತ್ತಿದೆ. ಆದ್ದರಿಂದ ನಮ್ಮ ಕಾರ್ಯಕರ್ತರು ಎದೆಗುಂದಬೇಡಿ. ಎಣಿಕೆಯ 14-18 ಸುತ್ತುಗಳು ಬಾಕಿ ಇವೆ. ಸೂರ್ಯ ಮುಳುಗಿದ ನಂತರ ನಾವು ಗೆಲ್ಲುತ್ತೇವೆ. ಹುಲಿ ಮರಿಗಳಂತೆ ಹೋರಾಡಿ ಎಂದು ಹೇಳಿದ್ದಾರೆ.
