ಬೆಂಗಳೂರು: ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ, ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಸೀಟು ಪಡೆದಿದ್ದರೂ ಆರ್ಥಿಕ ಸಮಸ್ಯೆಯಿಂದ ಕಂಗೆಟ್ಟಿದ್ದ ಇಬ್ಬರು ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಚಿವ ಎಂ ಬಿ ಪಾಟೀಲ್ ಅವರು ನೆರವು ನೀಡಿದ್ದಾರೆ.
ವಿಜಯಪುರ ಜಿಲ್ಲೆಯ ಆಲಮೇಲ ಗ್ರಾಮದ ಉದಯಕುಮಾರ ನಾರಾಯಣಕರ ಮತ್ತು ರತ್ನಾಪುರ ಗ್ರಾಮದ ಮನೋಹರ ಹರಗೆ ಅವರ ಎಂ.ಬಿ.ಬಿ.ಎಸ್ ಶಿಕ್ಷಣಕ್ಕೆ ಸಂಬಂಧಿಸಿದ ಬೋಧನಾ ಶುಲ್ಕ, ಊಟ ಹಾಗೂ ವಸತಿ (ಹಾಸ್ಟೆಲ್ ಮತ್ತು ಮೆಸ್) ಖರ್ಚಿಗೆ ಅಗತ್ಯವಿರುವ ಹಣದ ಚೆಕ್ಕುಗಳನ್ನು ವಿತರಿಸಿದರು. ಇದನ್ನೂ ಓದಿ: ಕರ್ನಾಟಕ ಪ್ರಗತಿ ಪೋರ್ಟಲ್ ಹಾಗೂ ಕೈಪಿಡಿ ಬಿಡುಗಡೆ
ವಿದ್ಯಾರ್ಥಿಗಳು ಶ್ರಮ ಮತ್ತು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಬೇಕು. ಶಿಕ್ಷಣಕ್ಕಾಗಿ ನೀಡಲಾಗುತ್ತಿರುವ ಆರ್ಥಿಕ ನೆರವನ್ನು ಸದ್ಬಳಕೆ ಮಾಡಿಕೊಂಡು ಬಸವನಾಡಿಗೆ ಕೀರ್ತಿ ತರಬೇಕು ಎಂದು ಶುಭಹಾರೈಸಿದರು.
ವಿದ್ಯಾರ್ಥಿಗಳ ವಿವರ ಮತ್ತು ನೆರವು
ಉದಯಕುಮಾರ ನಾರಾಯಣಕರ (ಆಲಮೇಲ): ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (HIMS) ಸೀಟು ಪಡೆದಿರುವ ಈತನ ತಂದೆ-ತಾಯಿ ಕೃಷಿ ಕಾರ್ಮಿಕರು. ಈ ವಿದ್ಯಾರ್ಥಿಯ ಓದಿಗೆ ₹1,88,850 ಮೊತ್ತದ ಚೆಕ್ ನೀಡಲಾಯಿತು. ಮುಂದೆ ‘ಚಿಕ್ಕಮಕ್ಕಳ ತಜ್ಞ’ನಾಗಿ ಸೇವೆ ಸಲ್ಲಿಸುವುದು ಈತನ ಗುರಿ.
ಕೃಷಿ ಕುಟುಂಬದ ಹಿನ್ನಲೆ ಹೊಂದಿರುವ ಮನೋಹರ ಹರಗೆ (ರತ್ನಾಪುರ): ಬೆಂಗಳೂರಿನ ಬಿ.ಎಂ.ಸಿ.ಆರ್.ಐ (BMCRI) ಕಾಲೇಜಿನಲ್ಲಿ ಸೀಟು ಪಡೆದಿದ್ದಾನೆ. ಈತನ ಶಿಕ್ಷಣಕ್ಕಾಗಿ ₹1,28,400 ಮೊತ್ತದ ಚೆಕ್ ವಿತರಿಸಲಾಯಿತು. ಈತ ಮುಂದೆ ‘ಹೃದ್ರೋಗ ತಜ್ಞ’ನಾಗುವ ಕನಸು ಹೊಂದಿದ್ದಾನೆ.
