ಬೇಸಿಗೆ ಕಾಲದಲ್ಲಿ ಸಾಮಾನ್ಯವಾಗಿ ಎಲ್ಲರೂ ತಣ್ಣಗೆ ಇರುವ ಪಾನಕ ಅಥವಾ ತಣ್ಣಗೆ ಇರುವ ಫ್ರಿಡ್ಜ್ ನ ನೀರನ್ನು ಕುಡಿಯಲು ಬಯಸುತ್ತಾರೆ. ಬಾಯಾರಿದ ತಕ್ಷಣವೇ ಫ್ರಿಡ್ಜ್ ನಲ್ಲಿ ಇರುವ ನೀರನ್ನು ಕುಡಿದರೆ ಆರೋಗ್ಯದ ಮೇಲೆ ಹಲವಾರು ಸಮಸ್ಯೆಗಳು ಆಗುತ್ತವೆ ಎಂದು ವೈದ್ಯರು ತಿಳಿಸುತ್ತಾರೆ. ಹಾಗಾಗಿ ಫ್ರಿಡ್ಜ್ ನಲ್ಲಿ ಇರಿಸಿರುವಂತ ತಂಪು ಪಾನೀಯಗಳು ಹಾಗೂ ನೀರನ್ನು ಕುಡಿಯುವ ಮುನ್ನ ಎಚ್ಚರಿಕೆವಹಿಸಿ ಇಲ್ಲದಿದ್ದರೆ ಆರೋಗ್ಯಕ್ಕೆ ಹಾನಿಕಾರ ಆಗುವುದಂತೂ ಪಕ್ಕ.
ಬಿಸಿಲಿನಲ್ಲಿ ಫ್ರಿಡ್ಜ್ ನಲ್ಲಿ ಇರಿಸಿದ ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಆಘಾತ ಉಂಟಾಗಿ ಗ್ಯಾಸ್, ಅಜೀರ್ಣ ಹಾಗೂ ಹೊಟ್ಟೆ ಸೆಳೆತದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಜೊತೆಗೆ ತಣ್ಣೀರು ವೇಗಸ್ ನರವನ್ನು ಪ್ರಭಾವಿತಗೊಳಿಸಿ ಹೃದಯ ಬಡಿತದಲ್ಲಿ ಬದಲಾವಣೆ ತರಬಹುದು.
ಅಲ್ಲದೆ ತಲೆನೋವು, ಶೀತ, ಕೆಮ್ಮು ಹಾಗೂ ಜ್ವರದಂತಹ ಸಮಸ್ಯೆಗಳಿಗೂ ಕಾರಣವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ದೇಹದ ತಾಪಮಾನಕ್ಕೆ ತಕ್ಷಣ ತಣ್ಣೀರು ಹೊಂದಿಕೊಳ್ಳಲು ಸಾಧ್ಯವಾಗದ ಕಾರಣ ಈ ರೀತಿಯ ಅಸ್ವಸ್ಥತೆಗಳು ಉಂಟಾಗುತ್ತವೆ. ಹಾಗಾಗಿ ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಫ್ರಿಡ್ಜ್ ನೀರಿನ ಬದಲು ಸಾಮಾನ್ಯ ತಾಪಮಾನದ ನೀರು, ಎಳೆನೀರು ಹಾಗೂ ಮಜ್ಜಿಗೆ ಸೇವಿಸುವುದು ಹೆಚ್ಚು ಸುರಕ್ಷಿತ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.
