ಮಾಡೆಲ್ ಹರ್ಷ ರಿಚಾರಿಯಾ ಹಲವಾರು ವೇದಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆ ಗಳಿಸಿದ ಅವರು ಇದೀಗ ಎಲ್ಲವನ್ನು ತ್ಯಜಿಸಿ 32ನೇ ವಯಸ್ಸಿನಲ್ಲಿಯೇ ಸನ್ಯಾಸಿಯಾಗಿ ಹೊಸ ಜೀವನ ಆರಂಭಿಸಿದ್ದಾರೆ.
ಹೌದು, 2025 ನೇ ಸಾಲಿನಲ್ಲಿ ಪ್ರಯಾಗರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಗಮನ ಸೆಳೆದಿದ್ದ ಮಾಡೆಲ್ ಹರ್ಷ ರಿಚಾ ಇದೀಗ ಸನ್ಯಾಸತ್ವ ಸ್ವೀಕರಿಸಿದ್ದು, ಹಲವರಲ್ಲಿ ಅಚ್ಚರಿ ಮೂಡಿಸಿದೆ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಗುರುಗಳ ಸಮ್ಮುಖದಲ್ಲಿ ತಮ್ಮದೇ ಪಿಂಡವನ್ನು ಬಿಟ್ಟು ಸನ್ಯಾಸ ಸ್ವೀಕರಿಸಿರುವ ಅವರು, ಇದೀಗ ‘ಸ್ವಾಮಿ ಹರ್ಷಾನಂದ ಗಿರಿ’ ಎಂಬ ಹೊಸ ಹೆಸರಿನಿಂದ ಪರಿಚಿತರಾಗಿದ್ದಾರೆ.
ಉಜ್ಜಯಿನಿಯ ಮೌನ್ ತೀರ್ಥ ಆಶ್ರಮದಲ್ಲಿ ಮಹಾಮಂಡಲೇಶ್ವರ ಸುಮಾನಂದ ಮಹಾರಾಜರ ಮಾರ್ಗದರ್ಶನದಲ್ಲಿ ಸಂಪ್ರದಾಯಬದ್ಧ ವಿಧಿವಿಧಾನಗಳೊಂದಿಗೆ ಸನ್ಯಾಸ ದೀಕ್ಷೆ ಸ್ವೀಕರಿಸಲಾಯಿತು. ಕೇವಲ 32ನೇ ವಯಸ್ಸಿನಲ್ಲಿ ಇಂತಹ ನಿರ್ಧಾರ ಕೈಗೊಂಡಿರುವುದು ಅನೇಕರಲ್ಲಿ ಆಶ್ಚರ್ಯ ಮೂಡಿಸಿದೆ.
ಕಳೆದ ಒಂದೂವರೆ ವರ್ಷಗಳಿಂದ ಆಧ್ಯಾತ್ಮದ ಕಡೆ ತಿರುಗಿದ್ದ ಹರ್ಷ ರಿಚಾರಿಯಾ, ಈಗ ಸಂಪೂರ್ಣವಾಗಿ ಲೌಕಿಕ ಜೀವನವನ್ನು ತ್ಯಜಿಸಿ ಸನ್ಯಾಸದ ದಾರಿಯಲ್ಲಿ ಹೆಜ್ಜೆ ಇಟ್ಟಿದ್ದಾರೆ. “ಇಲ್ಲಿಯವರೆಗೆ ನಾನು ನನ್ನ ಕುಟುಂಬ ಮತ್ತು ವೈಯಕ್ತಿಕ ಬದುಕಿನ ಬಗ್ಗೆ ಮಾತ್ರ ಯೋಚಿಸುತ್ತಿದ್ದೆ. ಇನ್ನು ಮುಂದೆ ಗುರುಜಿಯವರ ಮಾರ್ಗದರ್ಶನದಲ್ಲಿ ಧರ್ಮ ಮತ್ತು ಸಮಾಜದ ಸೇವೆಯತ್ತ ಗಮನ ಹರಿಸುತ್ತೇನೆ” ಎಂದು ಅವರು ತಿಳಿಸಿದ್ದಾರೆ.
