ಬೆಂಗಳೂರು: ಭಾರತ ದೇಶಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಕೇವಲ ಪುಸ್ತಕವಲ್ಲ, ಅದು ನಮ್ಮ ಬದುಕಿನ ದಾರಿದೀಪ. ಅಂದು ಭಿನ್ನಾಭಿಪ್ರಾಯಗಳಿದ್ದರೂ ಸಹ, ಅಂಬೇಡ್ಕರ್ ಅವರ ಮೇಧಾಶಕ್ತಿಯನ್ನು ಗುರುತಿಸಿ ಸಂವಿಧಾನ ರಚನೆಯ ಜವಾಬ್ದಾರಿಯನ್ನು ಅವರಿಗೆ ನೀಡಿದ್ದು ಕಾಂಗ್ರೆಸ್ ಪಕ್ಷದ ವಿಶಾಲ ಮನೋಭಾವಕ್ಕೆ ಸಾಕ್ಷಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದರು.
ಕೆಪಿಸಿಸಿ ಕಚೇರಿಯ ಭಾರತ ಜೋಡೋ ಭವನದಲ್ಲಿ ಇಂದು (ಮಂಗಳವಾರ ಏ. 14) ಆಯೋಜಿಸಲಾಗಿದ್ದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ವರನ್ನೂ ಒಳಗೊಳ್ಳುವ ಸಮಾನ ಸಮಾಜದ ನಿರ್ಮಾಣವೇ ನೈಜ ಪ್ರಜಾಪ್ರಭುತ್ವದ ಆಶಯ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಯೇ ನಮ್ಮ ನಿಜವಾದ ಗುರಿಯಾಗಬೇಕು. ನೊಂದವರನ್ನು ನಾವು ಹೇಗೆ ಸಮಾಜದ ಮುಖ್ಯವಾಹಿನಿಗೆ ತಂದಿದ್ದೇವೆ ಮತ್ತು ಅವರಿಗೆ ಎಂತಹ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದೇವೆ ಎಂಬುದು ಇಲ್ಲಿ ಅತಿ ಮುಖ್ಯವಾಗುತ್ತದೆ. ‘ಇತಿಹಾಸವನ್ನು ಮರೆತವನು ಇತಿಹಾಸವನ್ನು ಸೃಷ್ಟಿಸಲಾರ’ ಎಂಬ ಅಂಬೇಡ್ಕರ್ ಅವರ ಮಾತು ನಮಗೆಲ್ಲರಿಗೂ ಸದಾ ಸ್ಪೂರ್ತಿ.
ಇಂದು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೇಶದಾದ್ಯಂತ ನಾವು ಅತಿ ಹೆಚ್ಚು ಪ್ರತಿಮೆಗಳನ್ನು ಕಾಣುವುದು ಡಾ. ಬಿ.ಆರ್. ಅಂಬೇಡ್ಕರ್ ಅವರದ್ದೇ. ನಾನಿಲ್ಲಿ ಯಾವುದೇ ದೈವತ್ವವನ್ನು ಹೀಯಾಳಿಸುತ್ತಿಲ್ಲ, ಆದರೆ ಒಬ್ಬ ವ್ಯಕ್ತಿ ತನ್ನ ಜ್ಞಾನ ಮತ್ತು ಹೋರಾಟದಿಂದ ಹೇಗೆ ದೇವರಷ್ಟೇ ಎತ್ತರಕ್ಕೆ ಬೆಳೆಯಬಲ್ಲ ಎಂಬುದಕ್ಕೆ ಬಾಬಾಸಾಹೇಬರೇ ನಿದರ್ಶನ. ಇದನ್ನೂ ಓದಿ: ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ನಾನು ಸಿಎಂ ಆಗಿದ್ದೇನೆ: ಸಿಎಂ
ಎಲ್ಲರನ್ನು ಒಳಗೊಂಡು, ಎಲ್ಲರ ಅಭಿವೃದ್ಧಿಗೆ ಶ್ರಮಿಸುವ ಪಕ್ಷ ಯಾವುದಾದರೂ ಇದ್ದರೆ, ಅದು ನಮ್ಮ ಕಾಂಗ್ರೆಸ್ ಪಕ್ಷ ಮಾತ್ರ. ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ನಾಯಕರಲ್ಲ, ಅವರು ಈ ದೇಶದ ಪ್ರತಿಯೊಬ್ಬ ಪ್ರಜೆಯ ನಾಯಕ ಎಂದು ಹೇಳಿದರು.
