ಬೆಂಗಳೂರು: ಶಿಕ್ಷಣವೇ ಸಮಾನತೆಯ ಮೂಲಸ್ತಂಭ. ಗ್ರಾಮೀಣ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ನೀಡಿದ ಅವಕಾಶಗಳು ಇಂದು ಅದ್ಭುತ ಫಲಿತಾಂಶಗಳಾಗಿ ಮೂಡಿಬಂದಿವೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ. ಮಹಾದೇವಪ್ಪ ತಿಳಿಸಿದ್ದಾರೆ.
ಕ್ರೈಸ್ ವಸತಿ ಕಾಲೇಜುಗಳ 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸಿ ಮಾತನಾಡಿದ ಅವರು, ಈ ಬಾರಿ ಶೇ.97.22ರಷ್ಟು ಉತ್ತೀರ್ಣತೆ ಸಾಧಿಸಿರುವುದು ಕೇವಲ ಅಂಕಿಗಳ ಸಾಧನೆ ಅಲ್ಲ; ಇದು ಸಾಮಾಜಿಕ ಪರಿವರ್ತನೆಯ ಸಂಕೇತ ಎಂದು ಹೇಳಿದರು.
ಒಟ್ಟು 5103 ವಿದ್ಯಾರ್ಥಿಗಳಲ್ಲಿ 4961 ಮಂದಿ ಉತ್ತೀರ್ಣರಾಗಿದ್ದಾರೆ. ರಾಜ್ಯದ ಸರಾಸರಿ ಫಲಿತಾಂಶಕ್ಕಿಂತ ಶೇ.10.74 ಹೆಚ್ಚು ಸಾಧಿಸಿರುವುದು ನಮ್ಮ ಶಿಕ್ಷಣ ವ್ಯವಸ್ಥೆಯ ಗುಣಮಟ್ಟವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ವಿವರಿಸಿದರು.
ಡಿಸ್ಟಿಂಕ್ಷನ್ ಫಲಿತಾಂಶದಲ್ಲಿ ಉಂಟಾದ ಗಣನೀಯ ಏರಿಕೆಯನ್ನು ಉಲ್ಲೇಖಿಸಿದ ಸಚಿವರು, ಕಳೆದ ವರ್ಷ ಶೇ.24ರಷ್ಟಿದ್ದ ಡಿಸ್ಟಿಂಕ್ಷನ್ ಪ್ರಮಾಣ ಈ ವರ್ಷ ಶೇ.46ಕ್ಕೆ ಏರಿದೆ. ಇದು ಶಿಕ್ಷಕರ ಪರಿಶ್ರಮ ಮತ್ತು ವಿದ್ಯಾರ್ಥಿಗಳ ಶ್ರಮದ ಫಲ ಎಂದು ಅಭಿಪ್ರಾಯಪಟ್ಟರು.
ಬೆಳಗಾವಿ ಜಿಲ್ಲೆಯ ಅಂಕಿತ್ ಭೀಮಪ್ಪ ಕಾರಟಗಿ ರಾಜ್ಯದ ದ್ವಿತೀಯ ರ್ಯಾಂಕ್ ಪಡೆದಿರುವುದನ್ನು ಶ್ಲಾಘಿಸಿದ ಅವರು, ಸರ್ಕಾರಿ ವಲಯದ ವಿದ್ಯಾರ್ಥಿಯೊಬ್ಬನು ರಾಜ್ಯ ಮಟ್ಟದಲ್ಲಿ ಇಂತಹ ಸಾಧನೆ ಮಾಡಿರುವುದು ಹೆಮ್ಮೆಗೂ, ಪ್ರೇರಣೆಯೂ ಆಗಿದೆ ಎಂದರು.
72 ವಸತಿ ಕಾಲೇಜುಗಳಲ್ಲಿ 34 ಕಾಲೇಜುಗಳು ಶೇ.100 ಫಲಿತಾಂಶ ದಾಖಲಿಸಿರುವುದು ನಮ್ಮ ಶಿಕ್ಷಣ ವ್ಯವಸ್ಥೆಯ ಬಲವನ್ನು ತೋರಿಸುತ್ತದೆ. ಇದು ಯೋಜಿತ ಕಾರ್ಯಪದ್ಧತಿ ಮತ್ತು ಸಮರ್ಪಿತ ತಂಡದ ಕೆಲಸ ಎಂದು ಸಚಿವರು ಹೇಳಿದರು.
ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದ ಅವರು, “JEE, NEET, KCET ತರಬೇತಿ ಮೂಲಕ ವಿದ್ಯಾರ್ಥಿಗಳನ್ನು ರಾಷ್ಟ್ರಮಟ್ಟದ ಸ್ಪರ್ಧೆಗೆ ಸಿದ್ಧಗೊಳಿಸುತ್ತಿದ್ದೇವೆ. ಈ ವರ್ಷ 106 ವಿದ್ಯಾರ್ಥಿಗಳು JEE ಅರ್ಹತೆ ಪಡೆದಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಕಾಳಸಂತೆಯಲ್ಲಿ ಗ್ಯಾಸ್ ಹೆಚ್ಚನ ಧರದಲ್ಲಿ ಮಾರಾಟ ಮಾಡುವ ಮಾಲಿಕರ ವಿರುದ್ದ ಕಾನೂನು ಕ್ರಮ: ಕೆಹೆಚ್. ಮುನಿಯಪ್ಪ
ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಕೈಗೊಂಡ ಕ್ರಮಗಳ ಬಗ್ಗೆ ಮಾತನಾಡಿದ ಸಚಿವರು, ನಿಯೋಜಿತ ಪಾಠ್ಯಕ್ರಮ, ನಿರಂತರ ಮೌಲ್ಯಮಾಪನ, ವಿಶೇಷ ತರಗತಿಗಳು ಹಾಗೂ ವೈಯಕ್ತಿಕ ಮಾರ್ಗದರ್ಶನದ ಮೂಲಕ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ರೈಸ್ ಕಾರ್ಯನಿರ್ವಾಹಕ ನಿರ್ದೇಶಕ ಪಿ.ಎಸ್. ಕಾಂತರಾಜು ಉಪಸ್ಥಿತರಿದ್ದರು.
