ಬೆಂಗಳೂರು: 2023ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು, ಇದೀಗ ಪಂಚ ಗ್ಯಾರಂಟಿ ಯೋಜನೆಗೆ 1000 ದಿನಗಳು ಪೂರೈಸಿರುವುದರಿಂದ ಕಾಂಗ್ರೆಸ್ ಸರ್ಕಾರವು ಇಂದು ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಅಲ್ಲದೆ ಸಿಎಂ ಸಿದ್ದರಾಮಯ್ಯನವರು ಕೂಡ ಇತ್ತ ಸಾವಿರ ದಿನದ ಸಂಭ್ರಮದ ಕುರಿತು ತಮ್ಮ ಸೋಶಿಯಲ್ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಗ್ಯಾರಂಟಿ ಯೋಜನೆಗಳನ್ನು ಒಳಗೊಂಡ ಅಭಿವೃದ್ಧಿಯ ಹೊಸ ಮಾದರಿಯನ್ನು ಪರಿಚಯಿಸಿದ ಹೆಮ್ಮೆ ನಮ್ಮದು. ಕಳೆದ ಸಾವಿರ ದಿನಗಳಲ್ಲಿ ರೂ.1.13 ಲಕ್ಷ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳ ಮೂಲಕ ಜನರ ಮನೆ ಬಾಗಿಲಿಗೆ ತಲುಪಿಸಿದ್ದೇವೆ, ಇದರ ಜೊತೆ ರೂ.1 ಲಕ್ಷ ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಕ್ಕೆ ಕೊಡಲಾಗಿದೆ. ರಾಜ್ಯದ 1.37 ಕೋಟಿ ಕುಟುಂಬಗಳು ನಮ್ಮ ಸರ್ಕಾರದ ಒಂದಿಲ್ಲೊಂದು ಯೋಜನೆಯ ನೇರ ಫಲಾನುಭವಿಯಾಗಿದ್ದಾರೆ ಎನ್ನುವುದು ವಿಶೇಷ.
ನಮ್ಮ ಕಲ್ಯಾಣ ಕಾರ್ಯಕ್ರಮಗಳ ಫಲವಾಗಿ ರಾಜ್ಯದ ತಲಾದಾಯವು ದೇಶದಲ್ಲೇ ನಂಬರ್ ಒನ್ ಸ್ಥಾನಕ್ಕೇರಿದೆ. ಕೋಮುಗಲಭೆ, ಅಸಹಿಷ್ಣುತೆಯಿಂದ ನಲುಗಿದ್ದ ಕರ್ನಾಟಕದಲ್ಲಿ ಇಂದು ಶಾಂತಿ – ನೆಮ್ಮದಿ ನೆಲೆಸಿದೆ. ಇದರಿಂದ ನಿರೀಕ್ಷೆಗೂ ಮೀರಿದ ವಿದೇಶಿ ಬಂಡವಾಳ ಹೂಡಿಕೆ ಯೋಜನೆಗಳು ರಾಜ್ಯದತ್ತ ಹರಿದು ಬರುತ್ತಿವೆ.
ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿಸಬೇಕು ಎನ್ನುವ ಸಂಕಲ್ಪದೊಂದಿಗೆ ಅಧಿಕಾರಕ್ಕೆ ಬಂದ ನಮ್ಮ ಸರ್ಕಾರವು, ಆ ಹಾದಿಯಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಇದಕ್ಕೆ ಕಾರಣೀಕರ್ತರಾದ ತಮಗೆ ಹೃದಯಪೂರ್ವಕ ಧನ್ಯವಾದ ಸಲ್ಲಿಸುತ್ತಿದ್ದೇನೆ. ನಮ್ಮ ಈ ಎಲ್ಲಾ ಸಾಧನೆಗಳ ಶ್ರೇಯ ರಾಜ್ಯದ ಪ್ರತಿ ನಾಗರಿಕನಿಗೆ ಸಲ್ಲಬೇಕು. ಇದನ್ನೂ ಓದಿ: ಕರ್ನಾಟಕ ಸರ್ಕಾರದಿಂದ ಮತ್ತೊಂದು ಗ್ಯಾರಂಟಿ ಘೋಷಣೆ
ನಿಮ್ಮೆಲ್ಲರ ಆಶೀರ್ವಾದ, ಬೆಂಬಲದೊಂದಿಗೆ ಸಾವಿರ ದಿನದ ಪಯಣವನ್ನು ಯಶಸ್ವಿಯಾಗಿ ಪೂರೈಸಿರುವ ನಮ್ಮ ಸರ್ಕಾರಕ್ಕೆ ಮುಂದೆಯೂ ನಿಮ್ಮ ಪ್ರೀತಿ, ಸಹಕಾರವಿರಲಿ ಎಂದಿದ್ದಾರೆ.
