ಹಾಸನ: ಬಿ.ಪಿ.ಎಲ್ ಕಾರ್ಡ್ ಪರಿಷ್ಕರಣೆ ವೇಳೆ ಮನೆ ಸಾಲ, ಬೈಕ್ ಸಾಲಕ್ಕಾಗಿ ಆದಾಯ ತೆರಿಗೆ ಪಾವತಿಸುತ್ತಿರುವ ವಿನಾಯಿತಿ ನೀಡಬೇಕು, ದೀರ್ಘ ಕಾಲದಿಂದ ತೆರಿಗೆ ಪಾವತಿ ಮಾಡುತ್ತಿರುವರ ಕಾರ್ಡ್ ಗಳನ್ನು ಎ.ಪಿ.ಎಲ್ ಮಾತ್ರ ಪರಿವರ್ತಿಸಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್.ಮುನಿಯಪ್ಪ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು (ಶುಕ್ರವಾರ ಫೆ, 13) ಆಹಾರ ಮತ್ತು ನಾಗರಿಕ ಸರಬರಾಜು, ಕಾನೂನು ಮಾಪನ ಶಾಸ್ತ್ರ ಹಾಗೂ ಆಹಾರ ನಿಗಮದ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 2396 ಬಿಪಿಎಲ್ ಕಾರ್ಡ್‌ಗಳು ಪರಿಷ್ಕರಣೆಯಲ್ಲಿವೆ. ಈಗಾಗಲೇ ಬಿಪಿಎಲ್‌ನಿಂದ ಎಪಿಎಲ್‌ಗೆ ಪರಿವರ್ತಿಸಿದ್ದರೆ ಅಗತ್ಯ ದಾಖಲೆಗಳನ್ನು ಪಡೆದು ಬಿಪಿಎಲ್ ಕಾರ್ಡ್ ನೀಡಲು ಮರು ಪರಿಶೀಲನೆ ನಡೆಸಬೇಕು.
ಕುಟುಂಬದಲ್ಲಿ ಮಕ್ಕಳು ಬೇರೆ ಕಡೆ ಕೆಲಸ ಮಾಡಿಕೊಂಡು ಆದಾಯ ತೆರಿಗೆ ಪಾವತಿಸುತ್ತಿದ್ದರೆ ತಂದೆ-ತಾಯಿಗೆ ಬಿಪಿಎಲ್ ಕಾರ್ಡ್ ನೀಡಬಹುದು. ಈ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಬೇಕು ಎಂದರು.
75 ವಯಸ್ಸಿನ ಮೇಲ್ಪಟ್ಟ ಒಂಟಿ ಹಿರಿಯ ನಾಗರೀಕರು ಮಾತ್ರ ಇರುವ ಮನೆಗಳಿಗೆ ಅನ್ನಸುವಿಧಾ ಯೋಜನೆ ಮೂಲಕ ಅರ್ಹ ಫಲಾನುಭವಿಗಳ ನ್ಯಾಯಬೆಲೆ ಅಂಗಡಿಯವರು ಮನೆ ಬಾಗಿಲಿಗೆ ಪಡಿತರ ವಿತರಣೆ ಮಾಡಬೇಕು ಅಧಿಕಾರಿಗಳು ಆದ್ಯತೆ ಮೇಲೆ ಸಮರ್ಪಕವಾಗಿ ಅನುಷ್ಠಾನ ಮಾಡುವಂತೆ ತಿಳಿಸಿದರು. ಇದನ್ನೂ ಓದಿ: ಅಣೆಕಟ್ಟುಗಳು ದೇಶದ ಶಕ್ತಿ, ಪ್ರಗತಿಯ ಪ್ರತೀಕ: ಡಿ.ಕೆ. ಶಿವಕುಮಾರ್
ಜಿಲ್ಲೆಯಲ್ಲಿ 75 ವರ್ಷ ಮೀರಿದ 15 ಸಾವಿರ ನಾಗರಿಕರಿದ್ದು, ಅದರಲ್ಲಿ 10 ಸಾವಿರ ಜನರು ಮೊಬೈಲ್ ಹೊಂದದೆ ಇರುವ ಕಾರಣಕ್ಕೆ ಯೋಜನೆಯಿಂದ ವಂಚಿತರಾಗಿದ್ದಾರೆ. 148 ಜನರು ಮೃತಪಟ್ಟಿದ್ದಾರೆ. 2,750 ಫಲಾನುಭವಿಗಳಿಗೆ ಯೋಜನೆ ಲಾಭ ದೊರೆಯುತ್ತಿದೆ. ಇನ್ನು 2112 ಜನರ ಮನೆಗೆ ಆಹಾರ ಪದಾರ್ಥ ತಲುಪಬೇಕಿದ್ದು ಅಧಿಕಾರಿಗಳು ಮುತುವರ್ಜಿ ವಹಿಸಿ ತಲುಪಿಸಬೇಕು ಎಂದು ತಿಳಿಸಿದರು .
