ಬೆಂಗಳೂರು: ರಾಜ್ಯ ಸರ್ಕಾರ ಈಗಾಗಲೇ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಮುಂದಾಗಿದ್ದು, ಇದೇ ಮಾರ್ಚ್ ಅಂತ್ಯದೊಳಗಾಗಿ ಗ್ರಾಮ ಪಂಚಾಯಿತಿಗಳ ಚುನಾವಣೆ ನಡೆಸಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ ಖರ್ಗೆ ಅವರು ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು (ಮಂಗಳವಾರ ಫೆ. 03) ಶಾಸಕರಾದ ದೊಡ್ಡನಗೌಡ ಹನುಮಗೌಡ ಪಾಟೀಲ್ ಅವರು ರಾಜ್ಯ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಅವಧಿಯು ಮುಕ್ತಾಯಗೊಳ್ಳುತ್ತಿರುವುದರಿಂದ ಮುಂದಿನ ಚುನಾವಣೆ ನಡೆಸುವವರೆಗೂ ಆಡಳಿತಾಧಿಕಾರಿಯನ್ನು ನೇಮಿಸುವ ಬದಲು ಈಗಿರುವ ಗ್ರಾಮ ಪಂಚಾಯಿತಿ ಸದಸ್ಯರನ್ನೇ ಮುಂದುವರೆಸಬೇಕೆಂದು ತಿಳಿಸಿದ್ದಕ್ಕೆ ಉತ್ತರಿಸಿದ ಅವರು, ಚುನಾವಣೆ ನಡೆಸುವುದು ತುಂಬಾ ತಡವಾಗುವುದಾದರೆ ಮಾತ್ರ ಕಾನೂನಿನಡಿ ಗ್ರಾಮ ಪಂಚಾಯಿತಿ ಸದಸ್ಯರನ್ನೇ ಮುಂದುವರೆಸಲು ಅವಕಾಶವಿರುತ್ತದೆ. ಇದನ್ನೂ ಓದಿ: “ಲ್ಯಾಂಡ್ ಲಾರ್ಡ್” ಚಲನಚಿತ್ರಕ್ಕೆ ತೆರಿಗೆ ವಿನಾಯಿತಿ: ಸಿಎಂ
ಆದರೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿರುವುದರಿಂದ ಗ್ರಾಮ ಪಂಚಾಯಿತಿ ಸದಸ್ಯರನ್ನೇ ಮುಂದುವರೆಸುವ ಅವಶ್ಯಕತೆ ಬರುವುದಿಲ್ಲ. ಚುನಾವಣೆಯನ್ನು ಸರ್ಕಾರ ಆದಷ್ಟು ಬೇಗ ನಡೆಸಲಿದೆ. ಆದಾಗ್ಯೂ ಚುನಾವಣೆ ನಡೆಸುವುದು ತಡವಾದಲ್ಲಿ ಸದಸ್ಯರ ಮನವಿ ಕುರಿತು ಕಾನೂನಿನಡಿ ಪರಿಶೀಲಿಸಲಾಗುವುದು ಎಂದು ಹೇಳಿದರು.
