ಬೆಂಗಳೂರು: ಮಹಾತ್ಮ ಗಾಂಧೀಜಿಯವರು ದೇಶಕ್ಕೆ ನೀಡಿದ ಕೊಡುಗೆಯನ್ನು ಅವರ ಪುಣ್ಯಸ್ಮರಣೆಯ ದಿನ ಸ್ಮರಿಸಲಾಗುತ್ತಿದೆ. ಭಾರತ ಹಳ್ಳಿಗಳ ದೇಶವಾಗಿದ್ದು, ಅಂದು ಶೇ.80 ರಷ್ಟು ಜನ ಹಳ್ಳಿಗಳಲ್ಲಿ ವಾಸಿಸುತ್ತಿದ್ದರು. ಗ್ರಾಮಗಳು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಸ್ವಾವಲಂಬಿಯಾಗಬೇಕು. ಗ್ರಾಮಗಳ ಪ್ರಗತಿಯಲ್ಲಿಯೇ ದೇಶದ ಪ್ರಗತಿ ಅಡಗಿದೆ ಎಂದು ಅವರು ನುಡಿದಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ವಿಧಾನಸೌಧದಲ್ಲಿರುವ ಗಾಂಧೀಜಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ಪಂಚಾಯತಿಗಳಿವೆ. ಅವುಗಳಿಗೆ ಮಹಾತ್ಮ ಗಾಂಧಿಯವರ ಹೆಸರು ಇಡಬೇಕೆಂಬ ನಿರ್ಧಾರವನ್ನು ಕೈಗೊಳ್ಳಲಿದ್ದೇವೆ. ಅವರು ಗ್ರಾಮಸ್ವರಾಜ್ಯದ ಕಲ್ಪನೆಗೆ ಶಕ್ತಿ ತುಂಬಿದ್ದರು. ಹಳ್ಳಿಯಿಂದ ದಿಲ್ಲಿಯೇ ಹೊರತು, ದಿಲ್ಲಿಯಿಂದ ಹಳ್ಳಿಯಲ್ಲ ಎಂಬುದನ್ನು ಪ್ರತಿಪಾದಿಸಿದ್ದರು. ಇದನ್ನೂ ಓದಿ: ಸತ್ಯ, ಶಾಂತಿ, ಅಹಿಂಸೆ ಇವು ಗಾಂಧಿಯವರ ಬೋಧನೆಗಳಷ್ಟೇ ಅಲ್ಲ: ಸಿಎಂ
ಇಂತಹ ಮಹಾನ್ ಚೇತನ ಗುಂಡೇಟಿಗೆ ಬಲಿಯಾಗಿ ನಮ್ಮನ್ನ ಅಗಲಿದ್ದಾರೆ. ಗಾಂಧಿಯವರ ಅಭಿಮಾನಿಯೊಬ್ಬರು ಗಾಂಧೀಜಿಯವರನ್ನು 100 ವರ್ಷ ಬದುಕಬೇಕೆಂದು ಹಾರೈಸಿದ್ದಕ್ಕೆ, ಗಾಂಧೀಜಿಯವರು ‘’ನಾನು 125 ವರ್ಷಗಳು ದೇಶಕ್ಕಾಗಿ ಬದುಕಲಿಚ್ಛಿಸುತ್ತೇನೆ’ ಎಂದು ಉತ್ತರಿಸಿದ್ದರು. ಇಂದಿಗೂ ಇಡೀ ದೇಶ ಅವರ ಕೊಡುಗೆಯನ್ನು ಸ್ಮರಿಸುತ್ತದೆ ಎಂದರು.
