ಜಾಗತಿಕ ವೇದಿಕೆಯಲ್ಲಿ ಸದ್ದು ಮಾಡಿದ ‘ಪಂಕಜ’ | ನಿರ್ದೇಶಕಿ ಅನೂಯಾಗೆ ಅಡೋಬ್ ಸಂಸ್ಥೆಯಿಂದ ಗೌರವ
ಪಾರ್ಕ್ಸಿಟಿ (ಅಮೆರಿಕ): ಅಮೆರಿಕದ ಉತಾಹ್ ಪ್ರಾಂತ್ಯದ ಪಾರ್ಕ್ ಸಿಟಿಯಲ್ಲಿ 40 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಪ್ರತಿಷ್ಠಿತ ‘ಸನ್‌ಡಾನ್ಸ್ ಚಲನಚಿತ್ರೋತ್ಸವ’ಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಈ ಬಾರಿ ಕನ್ನಡಿಗರಿಗೆ ವಿಶೇಷ ಹೆಮ್ಮೆಯ ವಿಷಯವೆಂದರೆ, ಕನ್ನಡತಿ ಅನೂಯಾ ಸ್ವಾಮಿ ಅವರ ನಿರ್ದೇಶನದ ‘ಪಂಕಜ’ ಕಿರುಚಿತ್ರವು ಈ ಜಾಗತಿಕ ವೇದಿಕೆಗೆ ಆಯ್ಕೆಯಾಗಿ ಪ್ರದರ್ಶನಗೊಂಡಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ತಾಯ್ನಾಡಿನ ಕಥೆ
ನ್ಯೂಯಾರ್ಕ್ನಲ್ಲಿ ಪತ್ರಿಕೋದ್ಯಮ ಮತ್ತು ಸಿನಿಮಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿರುವ ಅನೂಯಾ ಸ್ವಾಮಿ, ತಮ್ಮ ತಾಯ್ನಾಡಿನ ಕಥೆಯನ್ನು ಜಗತ್ತಿಗೆ ಪರಿಚಯಿಸಬೇಕೆಂಬ ಹಂಬಲದಿಂದ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸನ್‌ಡಾನ್ಸ್ನ ಲೈಬ್ರರಿ ಸಿಟಿಯಲ್ಲಿ ಪ್ರದರ್ಶನಗೊಂಡ ‘ಪಂಕಜ’ ಚಿತ್ರವು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಬೆಂಗಳೂರಿನ ಅಗರದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಪದ್ಮಶ್ರೀ ಈ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಹರ್ಷಣಿ ಅವರು ತಾಯಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಅಡೋಬ್ ಸಂಸ್ಥೆಯಿಂದ ಗೌರವ
ಅಡೋಬ್ ಸೇರಿದಂತೆ ವಿವಿಧ ಪ್ರತಿಷ್ಠಿತ ಸಂಸ್ಥೆಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್‌ಡಾನ್ಸ್ ಉತ್ಸವಕ್ಕೆ ಆಯ್ಕೆಯಾದ ನಟ-ನಟಿಯರು ಹಾಗೂ ನಿರ್ದೇಶಕರನ್ನು ವೇದಿಕೆಗೆ ಕರೆದು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅನೂಯಾ ಸ್ವಾಮಿ, “ನನ್ನ ದೇಶದ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತುತಪಡಿಸಿರುವುದು ನನ್ನ ಭಾಗ್ಯ. ಇದಕ್ಕೆ ಸಹಕರಿಸಿದ ಪದ್ಮಶ್ರೀ, ಹರ್ಷಣಿ, ನಿರ್ಮಾಪಕರು ಮತ್ತು ನನ್ನ ಇಡೀ ತಂಡಕ್ಕೆ ಅಭಿನಂದನೆಗಳು,” ಎಂದು ಭಾವುಕರಾಗಿ ನುಡಿದರು.
ಟಿಕೆಟ್‌ಗಳಿಗೆ ಭಾರಿ ಬೇಡಿಕೆ
‘ಪಂಕಜ’ ಕಿರುಚಿತ್ರವು ಜನವರಿ 22 ರಿಂದ ಫೆಬ್ರವರಿ 1 ರವರೆಗೆ ಅಮೆರಿಕದ ವಿವಿಧ ಚಲನಚಿತ್ರ ಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ. ವಿಶೇಷವೆಂದರೆ, ಈಗಾಗಲೇ ಈ ಚಿತ್ರದ ಬಹುತೇಕ ಟಿಕೆಟ್‌ಗಳು ಮಾರಾಟವಾಗಿದ್ದು, ಚಿತ್ರದ ಬಗ್ಗೆ ಅನಿವಾಸಿ ಭಾರತೀಯರಲ್ಲಿ ಹಾಗೂ ಜಾಗತಿಕ ಸಿನಿ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ.
ಪಾರ್ಕ್ ಸಿಟಿಗೆ ಇದು ಭಾವುಕ ವಿದಾಯ
1985 ರಿಂದ ಪಾರ್ಕ್ ಸಿಟಿಯ ಕೊರೆಯುವ ಚಳಿಯಲ್ಲಿ ಸಾವಿರಾರು ಕಲಾವಿದರ ಕನಸುಗಳಿಗೆ ವೇದಿಕೆಯಾಗಿದ್ದ ಸನ್‌ಡ್ಯಾನ್ಸ್ ಉತ್ಸವವು ಮುಂದಿನ ವರ್ಷದಿಂದ ಕೊಲೊರಾಡೋದ ಬೋಲ್ಡರ್‌ಗೆ ಸ್ಥಳಾಂತರಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಆವೃತ್ತಿಯು ಪಾರ್ಕ್ ಸಿಟಿಯ ಪಾಲಿಗೆ ಅತ್ಯಂತ ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿದೆ.
