ಬೆಂಗಳೂರು: ಹಿಂದೆ ಬೈಯ್ಯಪ್ಪನಹಳ್ಳಿಯಲ್ಲಿದ್ದ ಸರಕಾರಿ ಸ್ವಾಮ್ಯದ ಎನ್.ಜಿ.ಇ.ಎಫ್ ಕಾರ್ಖಾನೆಗೆ ಸೇರಿದ 119 ಎಕರೆ ಜಾಗದ ಪೈಕಿ 65 ಎಕರೆ ಜಾಗದಲ್ಲಿ ವೃಕ್ಷೋದ್ಯಾನ ಅಭಿವೃದ್ಧಿಪಡಿಸಲಾಗುವುದು. ಮಾರ್ಚ್ ತಿಂಗಳಲ್ಲಿ ಮೊದಲ ಹಂತವನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.
ಎನ್.ಜಿ.ಇ.ಎಫ್. ಆವರಣಕ್ಕೆ ಇಂದು (ಶನಿವಾರ ಜ. 03) ಭೇಟಿ ನೀಡಿ ವೃಕ್ಷೋದ್ಯಾನ ಕಾಮಗಾರಿಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ವೃಕ್ಷೋದ್ಯಾನವನ್ನು ಹಂತ 1, 1ಎ, 1ಬಿ ಮತ್ತು 2 ಹೀಗೆ ನಾಲ್ಕು ಹಂತಗಳಲ್ಲಿ, 37.75 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. 1ಎ ಹಂತದ ಕಾಮಗಾರಿ ಕೂಡ ಮುಂದಿನ 6 ತಿಂಗಳಲ್ಲಿ ಮುಗಿಯಲಿದೆ. ಒಟ್ಟಾರೆ ಈ ಜಾಗದಲ್ಲಿ ಈಗಾಗಲೇ 8,500 ಬಗೆಬಗೆಯ ಮರಗಳಿವೆ. ಇವುಗಳ ವೈಜ್ಞಾನಿಕ ಹೆಸರನ್ನು ಈಗ ಪ್ರದರ್ಶಿಸಲಾಗಿದೆ. ಇವುಗಳ ಪೈಕಿ ಒಂದೇ ಒಂದು ಮರವನ್ನೂ ನಾವು ಕಡಿಯುವುದಿಲ್ಲ. ಆದರೆ ಇಲ್ಲಿರುವ ನೀಲಗಿರಿ ಜಾತಿಯ ಮರಗಳನ್ನು ಏನು ಮಾಡಬೇಕೆಂದು ವೈಜ್ಞಾನಿಕವಾಗಿ ಪರಿಶೀಲಿಸಿ, ತೀರ್ಮಾನಿಸಲಾಗುವುದು. ಹಂತ-1ರ ಕಾಮಗಾರಿಗಳಿಗೆ ಅಗತ್ಯವಿದ್ದ 11.50 ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದಿದ್ದಾರೆ.
ಎನ್ ಜಿಇಎಫ್ ಆವರಣದಲ್ಲಿರುವ ಆಡಳಿತ ಕಚೇರಿ ಕಟ್ಟಡಗಳು, ಕೈಗಾರಿಕಾ ಶೆಡ್ ಗಳು ಕೂಡ ಸುಭದ್ರವಾಗಿವೆ. ಇವೆಲ್ಲವೂ ಗಟ್ಟಿಮುಟ್ಟಾಗಿವೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಪರೀಕ್ಷಿಸಿ, ಹೇಳಿದ್ದಾರೆ. ಆದ್ದರಿಂದ ಈ ಕಟ್ಟಡಗಳಿಗೇ ಹೊಸ ರೂಪ ಕೊಟ್ಟು ಅಗತ್ಯಗಳನ್ನು ಪೂರೈಸಿಕೊಳ್ಳಲಾಗುವುದು. ಕಾಂಪೌಂಡಿನ ಹೊರಗೂ ಕಾರ್ಖಾನೆಗೆ ಸೇರಿದ 4.5 ಎಕರೆ ಜಾಗವಿದೆ. ಅಲ್ಲಿ 5ರಿಂದ 7 ಸಾವಿರ ವಾಹನಗಳ ನಿಲುಗಡೆಗೆ ಬಹುಮಹಡಿ ಪಾರ್ಕಿಂಗ್ ಲಾಟ್ ನಿರ್ಮಿಸಲಾಗುವುದು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿಯವರಿಗೆ ಗಾಂಧೀಜಿ ಫೋಟೋ ಬಳಸುವ ಯೋಗ್ಯತೆ ಇಲ್ಲ: ಡಿಕೆಶಿ
ಈಗಾಗಲೇ ಇರುವ ಎರಡು ಎಲೆಕ್ಟ್ರಿಕ್ ಮೋಟಾರ್ ಶೆಡ್ ಗಳಲ್ಲಿ ಕನಿಷ್ಠ 15 ಸಾವಿರ ಆಸನ ವ್ಯವಸ್ಥೆ ಇರುವ ಎರಡು ಪ್ರತ್ಯೇಕ ಕನ್ವೆನ್ಶನ್ ಸೆಂಟರ್ ನಿರ್ಮಿಸಲಾಗುವುದು. ಇಲ್ಲಿ ಸಮಾವೇಶ, ಸಮಾರಂಭ, ವಾರ್ಷಿಕೋತ್ಸವ, ಸಮ್ಮೇಳನ, ವಿಚಾರ ಸಂಕಿರಣ, ಕಾರ್ಯಕ್ರಮ ಇತ್ಯಾದಿಗಳನ್ನು ಮಾಡಬಹುದು. ಇದರ ಜೊತೆಗೆ `ಇನ್ನೋವರ್ಸ್’ ಹೆಸರಿನಲ್ಲಿ ನವೋದ್ಯಮಗಳಿಗೆ ಬೇಕಾದ ಪರಿಪೋಷಣಾ ಕೇಂದ್ರವನ್ನು ಸರಕಾರದ `ಕಿಟ್ಸ್’ ಸಂಸ್ಥೆಯ ವತಿಯಿಂದ ಸ್ಥಾಪಿಸಲಾಗುವುದು. ಇಲ್ಲಿ ನವೋದ್ಯಮ ವಲಯದವರು ಬಂದು ಕೆಲಸವನ್ನೂ ಮಾಡಬಹುದು. ಜೊತೆಗೆ ಐಟಿ-ಬಿಟಿ ಇಲಾಖೆಯು ಇಲ್ಲಿ 100 ಕೋಟಿ ರೂ. ವೆಚ್ಚದಲ್ಲಿ `ಟೆಕ್ನಾಲಜಿ ಇನ್ನೋವೇಶನ್ ಮ್ಯೂಸಿಯಂ’ಅನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.
