ಬೆಂಗಳೂರು: ಬಿಜೆಪಿ ನಾಯಕರು ಗಾಂಧೀಜಿ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಳೆದುಕೊಂಡಿದ್ದಾರೆ. ತಮ್ಮ ಕಚೇರಿಗಳಲ್ಲಿ ಗಾಂಧೀಜಿ ಅವರ ಫೋಟೋ ಇಟ್ಟುಕೊಳ್ಳುವ ಯೋಗ್ಯತೆ ಕೂಡ ಅವರು ಉಳಿಸಿಕೊಂಡಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹರಿಹಾಯ್ದರು.
ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಜತೆ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಇಂದು (ಶನಿವಾರ ಜ. 03) ಮಾತನಾಡಿದ ಅವರು, ಬಿಜೆಪಿ ನಾಯಕರು ಇನ್ನು ಮುಂದೆ ಮಹಾತ್ಮಾ ಗಾಂಧಿ ಅವರ ಪ್ರತಿಮೆ ಮುಂದೆ ಕೂತು ಹೋರಾಟ ಮಾಡುವ ಹಕ್ಕನ್ನು ಕಳೆದುಕೊಂಡಿದ್ದಾರೆ. ಮಹಾತ್ಮಾ ಗಾಂಧಿ ಅವರ ಫೋಟೋಗಳನ್ನು ತಮ್ಮ ಕಚೇರಿಗಳಲ್ಲಿ ಹಾಕಿಕೊಳ್ಳುವ ಅರ್ಹತೆಯನ್ನು ಕಳೆದುಕೊಂಡಿದ್ದಾರೆ. ಅವರ ಫೋಟೋ ಹಾಕಿಕೊಳ್ಳುವ ಯೋಗ್ಯತೆ ನಿಮಗಿಲ್ಲ. ಅವರ ಹೆಸರನ್ನು ಯೋಜನೆಯಿಂದ ತೆಗೆದ ಮೇಲೆ ನಿಮಗೆ ಯಾವ ನೈತಿಕತೆ ಇದೆ? ನೀವು ಮಹಾತ್ಮಾ ಗಾಂಧಿ ಬಗ್ಗೆ ಮಾತನಾಡುವ ಹಾಗೂ ಅವರ ಪ್ರತಿಮೆಗೆ ಹೂವಿನ ಹಾರ ಹಾಕುವ ಹಕ್ಕೂ ಇಲ್ಲ. ನಿಮ್ಮ ಬಳಿ ಇರುವ ಮಹಾತ್ಮಾ ಗಾಂಧೀಜಿ ಅವರ ಫೋಟೋಗಳನ್ನು ನಮಗೆ ಕೊಟ್ಟುಬಿಡಿ, ನಾವು ಅವುಗಳನ್ನು ನಮ್ಮ ಹಾಗೂ ಗಾಂಧಿಜಿಯನ್ನು ಗೌರವಿಸುವ ಮನೆಯಲ್ಲಿ ಇಟ್ಟುಕೊಳ್ಳುತ್ತೇವೆ ಎಂದರು. ಇದನ್ನೂ ಓದಿ: ಹಳ್ಳಿ ಅಧಿಕಾರ ಕಸಿದುಕೊಂಡ ಮೋದಿ ಸರ್ಕಾರ: ಸಿಎಂ ಆಕ್ರೋಶ
ಮಹಾತ್ಮಾ ಗಾಂಧೀಜಿ ಅವರು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಲು ನೇತೃತ್ವ ವಹಿಸಿ ನೂರು ವರ್ಷಗಳು ತುಂಬಿವೆ. ಇಂತಹ ಸಂಭ್ರಮಾಚರಣೆ ವೇಳೆ ಅವರ ಹೆಸರನ್ನು ತೆಗೆದು, ಮತ್ತೊಮ್ಮೆ ಅವರ ಕೊಲೆ ಮಾಡುತ್ತಿದ್ದೀರಲ್ಲಾ, ಈ ದೇಶದಲ್ಲಿ ಇದಕ್ಕಿಂತ ದೊಡ್ಡ ಅಪಮಾನ ಬೇರೋಂದಿಲ್ಲ ಎಂದು ಹೇಳಿದರು.
ಮಸೂದೆ ಹಿಂಪಡೆಯುವವರೆಗೂ ಆಂದೋಲನ
ರಾಜ್ಯದ ಕೂಲಿ ಕಾರ್ಮಿಕರ ಬದುಕು ಹಾಗೂ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಮಾರಕವಾಗಿರುವ ವಿಬಿ ಜಿ ರಾಮ್ ಜಿ ಮಸೂದೆಯನ್ನು ಕೇಂದ್ರ ಸರ್ಕಾರ ಹಿಂಪಡೆಯುವವರೆಗೂ ಪಕ್ಷತೀತವಾಗಿ ಆಂದೋಲನ ರೂಪಿಸಲಾಗುವುದು. ಈ ಮಸೂದೆ ವಿರುದ್ಧದ ಹೋರಾಟ ಕೇವಲ ಪಕ್ಷ ಅಥವಾ ಸರ್ಕಾರಕ್ಕೆ ಮಾತ್ರ ಸೀಮಿತವಲ್ಲ. ಪ್ರತಿ ಪಂಚಾಯ್ತಿಯಲ್ಲಿ ಪ್ರತಿಯೊಬ್ಬರನ್ನು ಆಹ್ವಾನ ನೀಡಿ ನಮ್ಮ ನಾಯಕರು ಸೇರಿ ಸಮಾವೇಶ ಹಾಗೂ ಗ್ರಾಮ ಸಭೆ ನಡೆಸುತ್ತೇವೆ. ಅಲ್ಲಿ ಇದರ ಬಗ್ಗೆ ಚರ್ಚೆ ಮಾಡುತ್ತೇವೆ. ನಂತರ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ. ಕೇಂದ್ರ ಸರ್ಕಾರ ಹೇಗೆ ಕೃಷಿ ಕರಾಳ ಕಾಯ್ದೆ ಹಿಂಪಡೆಯಿತೋ ಅದೇ ರೀತಿ ಈ ಮಸೂದೆಯನ್ನು ಹಿಂಪಡೆಯುವಂತೆ ಮಾಡಲು ಆಂದೋಲನ ಮಾಡುತ್ತೇವೆ. ಪಕ್ಷಬೇಧ ಮರೆತು ನಮ್ಮ ಹೋರಾಟ ರೂಪಿಸುತ್ತೇವೆ ಎಂದು ಹೇಳಿದರು.
ಕಳೆದ 20 ವರ್ಷಗಳಿಂದ ಹಳ್ಳಿ ಜನ ತಮ್ಮ ಬೆವರು ಸುರಿಸಿ ತಮ್ಮ ಹಳ್ಳಿಗಳ ಅಭಿವೃದ್ಧಿ ಮಾಡುವ ಪ್ರಯತ್ನಕ್ಕೆ ಅಂತ್ಯ ಹಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಹೊಸ ಮಸೂದೆ ನಮ್ಮ ಕರಾವಳಿ ಭಾಗದ ಮೀನುಗಾರರಿಗೂ ಅನ್ಯಾಯವಾಗಲಿದೆ. ಮನರೇಗಾ ಯೋಜನೆಯಲ್ಲಿ ಮೀನುಗಾರರಿಗೂ ಕೂಲಿ ಪಡೆಯುವ ಅವಕಾಶವಿತ್ತು. ಇದನ್ನೂ ಕಸಿಯಲಾಗಿದೆ. ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ವಿಬಿ ಜಿ ರಾಮ್ ಜಿ ಯೋಜನೆಯನ್ನು ಸರಿ ಎಂದು ಸ್ವಾಗತಿಸುತ್ತಿಲ್ಲ, ತಪ್ಪು ಎಂದು ವಿರೋಧ ಮಾಡುತ್ತಿಲ್ಲ. ಈ ವಿಚಾರದಲ್ಲಿ ಮೌನ ವಹಿಸಿದ್ದಾರೆ ಯಾಕೆ? ಎಂದು ಪ್ರಶ್ನಿಸಿದರು.
