ಶಹಾಪುರ:ಲೋಕಪಯೋಗಿ ಇಲಾಖೆಯಲ್ಲಿ ವಿವಿಧ ಯೋಜನೆಯ ಕಾಮಗಾರಿಗಳ ಟೆಂಡರ್ನಲ್ಲಿ ಭಾಗವಹಿಸಿದ ಗುತ್ತಿಗೆದಾರರಿಗೆ ನಿಯಮಾನುಸಾರವಾಗಿ ಎಲ್-1 ಗುತ್ತಿಗೆದಾರರಿಗೆ ಕೆಲಸ ನೀಡಬೇಕು ಎಂದು ಸುವರ್ಣ ಕರ್ನಾಟಕ ಕಾರ್ಯನಿರತ ಗುತ್ತಿಗೆದಾರರ ಸಂಘದ ತಾಲೂಕ ಅಧ್ಯಕ್ಷ ಸಂಗಣ್ಣ ದೊಡ್ಮನಿ ಆಗ್ರಹಿಸಿದ್ದಾರೆ.
ಈ ಕುರಿತು ಪಂಚಾಯತ್ ರಾಜ್ ಇಂಜಿನಿಯರಿಂಗ್ ಕಾರ್ಯಪಾಲಕ ಅಭಿಯಂತರರಿಗೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ಹಾಗೂ ಲೋಕಪಯೋಗಿ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ, ಟೆಂಡರ್ನಲ್ಲಿ ಗುತ್ತಿಗೆದಾರರು ಅರ್ಹ ದಾಖಲೆಗಳು ಸಲ್ಲಿಸಿ ಟೆಂಡರ್ ಪಡೆದಿರುತ್ತಾರೆ. ಅರ್ಹ ದಾಖಲೆಗಳಿದ್ದರೂ ಸಹ ಯಾವುದೋ ನೆಪ ಹೇಳಿ ಎಲ್-1 ಗುತ್ತಿಗೆದಾರರನ್ನು ರದ್ದುಪಡಿಸಿ ತಮಗೆ ಬೇಕಾದ ಎಲ್ 2,3,4, ಗಳಂತೆ ಅನರ್ಹರಿಗೆ ಕೆಲಸ ನೀಡುತ್ತಿರುವ ಅಧಿಕಾರಿಗಳ ನಡೆ ಖಂಡನೀಯ. ಇದರಿಂದ ಅರ್ಹ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ಅಧಿಕಾರಿಗಳು ತಮ್ಮ ಹಣದಾಸೆಗೆ ಬೇಕಾದವರ ಹೆಸರಿನಲ್ಲಿ ಕೆಲಸ ನೀಡಿ ವಂಚಿಸುತ್ತಿದ್ದಾರೆ. ಸರ್ಕಾರದ ಟೆಂಡರ್ ನಿಯಮಾನುಸಾರ ಎಲ್ -1 ಗುತ್ತಿಗೆದಾರರಿಗೆ ಅರ್ಹರಿಗೆ ಅಗ್ರಿಮೆಂಟ್ ಮಾಡಿ ಕೆಲಸ ನೀಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಸಂಘದಿಂದ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಗುತ್ತಿಗೆದಾರರಿಗೆ ಸರಿಯಾದ ಬಿಲ್ ಪಾವತಿಯಾಗದ ಹಿನ್ನಲೇ ಅದೆಷ್ಟೋ ಕುಟುಂಬಗಳು ಸಾಲಕ್ಕೆ ಬೀದಿಗೆ ಬಿದ್ದಿವೆ. ಆದರೂ ಸಹ ಗುತ್ತಿಗೆದಾರರ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕರುಣೆ ಇಲ್ಲದಂತಾಗಿದೆ. ಇದರ ನಡುವೆ ಎಲ್ -1 ಗುತ್ತಿಗೆದಾರರಿಗೆ ಅಧಿಕಾರಿಗಳ ವರ್ಗ ವಂಚಿಸುತ್ತಿರುವುದು ಅನ್ಯಾಯ. ಕೂಡಲೇ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಇಂತಹ ಅನರ್ಹ ಚಟುವಟಿಕೆ ಕೈಬಿಟ್ಟು. ಎಲ್ -1 ಗುತ್ತಿಗೆದಾರರಿಗೆ ನ್ಯಾಯ ಒದಗಿಸಿಕೊಡಬೇಕು. ಮತ್ತು ಕಾಮಗಾರಿಗಳನ್ನು ಪ್ಯಾಕೇಜ್ ಮೂಲಕ ಟೆಂಡರ್ ಆಹ್ವಾನಿಸುವ ಆದೇಶವನ್ನು ಸರ್ಕಾರ ಕೂಡಲೇ ವಾಪಸ್ ಪಡೆಯಬೇಕು ಎಂದು ಪ್ರಥಮ ದರ್ಜೆ ಗುತ್ತಿಗೆದಾರಾದ ಮಾಳಿಂಗರಾಯ ತಾಳಿಕೋಟಿ ಹೇಳಿದರು.
ಈ ವೇಳೆ ತಾಲೂಕ ಕಾರ್ಯದರ್ಶಿ ಹಣಂತ್ರಾಯಗೌಡ ಗಂಗನಾಳ ಸೇರಿದಂತೆ ಗುತ್ತಿಗೆದಾರರು ಇದ್ದರು.
