ಬೆಂಗಳೂರು: ಮೋದಿ ಸರ್ಕಾರ ಸಂಸತ್ತಿನಲ್ಲಿ ಯಾವುದೇ ಚರ್ಚೆ ಮಾಡದೇ ವಿಬಿ ಜಿ ರಾಮ್ ಜಿ ಮಸೂದೆ ಅಂಗೀಕರಿಸಿದ್ದಾರೆ. ಮನರೇಗಾ ಯೋಜನೆ ಕಾಯ್ದೆ ಸುಧಾರಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಇವರು ಸುಧಾರಿಸಿಯೂ ಇಲ್ಲ, ಸಬಲೀಕರಣ ಮಾಡಿಲ್ಲ. ಮನರೇಗಾ ಕಾಯ್ದೆಯನ್ನು ತೆಗೆದು ಹಾಕಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 19-20 ವರ್ಷಗಳಿಂದ ಉದ್ಯೋಗ ಖಾತರಿ ಯೋಜನೆಯು ಗ್ರಾಮೀಣ ಪ್ರದೇಶದಲ್ಲಿ ಜೀವನೋಪಾಯದ ಗ್ಯಾರಂಟಿ ನೀಡಿತ್ತು. ಮೋದಿ ಸರ್ಕಾರ ಈ ಗ್ಯಾರಂಟಿ ಕಸಿದುಕೊಂಡಿದೆ. ಬೇಡಿಕೆ ಆಧಾರಿತ ಯೋಜನೆ, ವಿತರಣೆ ಆಧಾರಿತ ಯೋಜನೆಯಾಗಿದೆ. ಈ ಹಿಂದೆ ಕೇಂದ್ರ ಸರ್ಕಾರ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿತ್ತು. ಈಗ ಇದು ಕಾಯ್ದೆಯಾಗಿ ಉಳಿದಿಲ್ಲ. ಇತರೆ ಸರ್ಕಾರಿ ಯೋಜನೆಗಳಲ್ಲಿ ಒಂದಾಗಿದೆ.
ಮೋದಿ ಸರ್ಕಾರ ವಿಬಿ ಜಿ ರಾಮ್ ಜಿ ಬಿಲ್ ತಂರುವ ಮೂಲಕ 3 ಪ್ರಮುಖ ಸಂವಿಧಾನಿಕ ಹಕ್ಕು ಮೊಟಕುಗೊಳಿಸಿದೆ.ಜೀವನೋಪಾಯದ ಹಕ್ಕು ಕಸಿದಿರುವುದು, ಪಂಚಾಯಿತಿಗಳ ಹಕ್ಕು ಕಸಿದಿದೆ. ರಾಜ್ಯ ಸರ್ಕಾರಗಳ ಅಭಿಪ್ರಾಯ ಪಡೆಯದೇ ರಾಜ್ಯದ ಮೇಲೆ ಆರ್ಥಿಕ ಹೊರೆ ಹಾಕಿದ್ದಾರೆ. ಇದನ್ನೂ ಓದಿ: ಅವರೆಕಾಳು ಮೇಳಕ್ಕೆ ಚಾಲನೆ ನೀಡಿದ ಡಿಸಿಎಂ
ಮನರೇಗಾದಲ್ಲಿ ಉದ್ಯೋಗದ ಹಕ್ಕು ಎಂದು ಇತ್ತು. ಹೊಸ ಯೋಜನೆಯಲ್ಲಿ ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಮಾತ್ರ ಉದ್ಯೋಗ ಎಂದು ಮಾಡಲಾಗಿದೆ. ಈ ಮಸೂದೆಯ ಸೆಕ್ಷನ್ 5ನಲ್ಲಿ ಕೇಂದ್ರ ಸರ್ಕಾರ ಪ್ರತಿ ಆರ್ಥಿಕ ವರ್ಷದಲ್ಲಿ ರಾಜ್ಯಗಳಿಗೆ ನೀಡಲಾಗುವ ಅನುದಾನದ ಮೇಲೆ ಕೆಲಸ ಮಾಡಬೇಕಾಗುತ್ತದೆ ಎಂದು ತಿಳಿಸಿದೆ. ಇನ್ನು ಸೆಕ್ಷನ್ 5(1)ರಲ್ಲಿ ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ಕೇಂದ್ರ ಸರ್ಕಾರದ ಅಧಿಸೂಚನೆಗೊಳಿಸಿದ ಪ್ರದೇಶಗಳಲ್ಲಿ ಅನುದಾನ ನೀಡುತ್ತದೆ. ಈ ರೀತಿ ಅನುದಾನ ನೀಡಿದ ನಂತರ ಆ ಭಾಗದ ಉದ್ಯೋಗ ಕಾರ್ಡ್ ಹೊಂದಿರುವವರು ಕೆಲಸ ಮಾಡಬಹುದು ಎಂದು ಹೇಳಿದೆ. ಈ ಹಿಂದೆ ಒಬ್ಬ ವ್ಯಕ್ತಿ ಮನರೇಗಾ ಉದ್ಯೋಗ ಕಾರ್ಡ್ ಹೊಂದಿದ್ದರೆ ಆತ ಎಲ್ಲಿ ಬೇಕಾದರೂ ಹೇಗಿ ಕೆಲಸ ಮಾಡುವ ಅವಕಾಶವಿತ್ತು. ಈಗ ಈ ಅವಕಾಶವನ್ನು ಕಸಿದುಕೊಳ್ಳಲಾಗಿದೆ ಎಂದರು.
