ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾದ ಎಂ.ಸತೀಶ್ ರೆಡ್ಡಿ ಅವರಿಗೆ ಇಂದು 53ನೇ ಹುಟ್ಟುಹಬ್ಬದ ಸಂಭ್ರಮ.
ಹೌದು, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಜನ ಮೆಚ್ಚಿದ ನಾಯಕ ಎಂ.ಸತೀಶ್ ರೆಡ್ಡಿ ತಮ್ಮ ಹುಟ್ಟುಹಬ್ಬವನ್ನ ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು ಸತೀಶ್ ರೆಡ್ಡಿ ಅವರಿಗೆ ಶುಭ ಕೋರಿದ್ದಾರೆ. ಜನ್ಮದಿನದ ಹಿನ್ನೆಲೆ ಸತೀಶ್ ರೆಡ್ಡಿ ಅವರು ಬೆಳ್ಳಂ ಬೆಳಗ್ಗೆ ಅಗರದಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಹೋಮ ಹವನ ನೆರವೇರಿಸಿದ್ರು.
ನಂತರ ಅವರ ಅಭಿಮಾನಿಗಳು ಬೃಹತ್ ಸೇಬಿನ ಹಾರ ಹಾಕಿ ಮೆರವಣಿಗೆ ಮಾಡುವ ಮೂಲಕ ಸತೀಶ್ ರೆಡ್ಡಿ ಅವರ ಹುಟ್ಟುಹಬ್ಬಕ್ಕೆ ಮೆರಗು ನೀಡಿದ್ರು. ಅಲ್ಲದೆ ಬೃಹದಾಕಾರದ ಕೇಕ್ ಕಟಿಂಗ್ ಕೂಡ ನೆರವೇರಿಸಿದ ಸತೀಶ್ ರೆಡ್ಡಿ ಅಭಿಮಾನಿಗಳೊಟ್ಟಿಗೆ ಸಿಹಿ ಹಂಚಿಕೊಂಡರು.
ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಕ್ಷೇತ್ರದ ಜನತೆಯ ಆಶೀರ್ವಾದದಿಂದ ನಾನು ಇಷ್ಟೊಂದು ಉನ್ನತ ಮಟ್ಟಕ್ಕೆ ಏರಲು ಸಾಧ್ಯವಾಗಿದೆ. ನಿಮ್ಮ ಆಶೀರ್ವಾದ ಸದಾ ನನ್ನ ಮೇಲೆ ಇರಲಿ. ನನಗೆ ನಿಮ್ಮೆಲ್ಲರ ಸೇವೆ ಮಾಡಲು ಅನುಕೂಲ ಮಾಡಿ ಕೊಟ್ಟಿರುವುದು ನನ್ನ ಪೂರ್ವ ಜನ್ಮದ ಪುಣ್ಯ ಎಂದು ಕ್ಷೇತ್ರದ ಜನತೆಗೆ ಧನ್ಯವಾದ ತಿಳಿಸಿದರು. 
ಇನ್ನು ರಾಜಕಾರಣಿಗಳು ಸೆಲೆಬ್ರೆಟಿಗಳು ಸಾಮಾನ್ಯವಾಗಿ ಹುಟ್ಟು ಹಬ್ಬ ಅಂದ್ರೆ, ಕೇಕ್ ಕಟ್ ಮಾಡುವುದರ ಜೊತೆಗೆ ಪಾರ್ಟಿಗಳ ಮೊರೆ ಹೋಗುತ್ತಾರೆ. ಆದ್ರೆ ಸತೀಶ್ ರೆಡ್ಡಿ ಅವರು ತಮ್ಮ ಹುಟ್ಟು ಹಬ್ಬದ ಅಂಗವಾಗಿ ತಮ್ಮ ಕ್ಷೇತ್ರದಲ್ಲಿ ಉಚಿತ ಆರೋಗ್ಯ ತಪಾಸಣೆ, ಸ್ತ್ರೀರೋಗ ಮತ್ತು ಪ್ರಸೂತಿ ತಪಾಸಣೆ, ಕಣ್ಣಿನ ತಪಾಸಣೆ, ಮೂಳೆ ಮತ್ತು ಕೀಲು ರೋಗ ತಪಾಸಣೆ, ಸೇರಿದಂತೆ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ, ಕ್ಷೇತ್ರದ ಮಹಿಳೆಯರಿಗೆ ಸೀರೆ ವಿತರಣೆ ಸೇರಿದಂತೆ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಇದನ್ನೂ ಓದಿ: ಸಿಎಂ ಕುರ್ಚಿ ಕದನ; ಸ್ಫೋಟಕ ಮಾಹಿತಿ ಹೊರ ಹಾಕಿದ ಡಿಕೆಶಿ
ಇನ್ನು ನೆಚ್ಚಿನ ನಾಯಕನ ಹುಟ್ಟು ಹಬ್ಬದ ಸಂಭ್ರಮಾಚರಣೆಯಲ್ಲಿ ಸಾವಿರಾರು ಜನರು ಆಗಮಿಸಿ, ಸತೀಶ್ ರೆಡ್ಡಿಯವರಿಗೆ ಶುಭ ಕೋರಿದ್ರು. ಒಟ್ಟಾರೆ ಹುಟ್ಟುಹಬ್ಬದ ಅಂಗವಾಗಿ ಸಮಾಜಮುಖಿ ಕಾರ್ಯ ಮಾಡುತ್ತಿರುವ ಶಾಸಕರ ಸಮಾಜ ಸೇವೆ, ದಾನ ಧರ್ಮ ಹೀಗೆ ಮುಂದುವರೆಯಲಿ ಎನ್ನುವುದೇ ನಮ್ಮ ಆಶಯ.
