ಬೆಂಗಳೂರು: ರಾಜ್ಯದಲ್ಲಿ ಪ್ರತಿಯೊಂದು ವಸ್ತುಗಳ ಬೆಲೆಯೂ ಏರಿಕೆಯಾಗಿದ್ದು ಜನ ಕಂಗೆಟ್ಟು ಹೋಗಿದ್ದಾರೆ. ಇದೊಂದು “ಪಿಕ್ ಪಾಕೆಟ್ ಸರ್ಕಾರ” ಹಾಗೂ “ಎಕ್ಸ್ಟಾರ್ಷನ್ ಸರ್ಕಾರ” ಎಂದು ವಿಧಾನ ಪರಿಷತ್ ಶಾಸಕ ಟಿ.ಎ. ಶರವಣ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯನ್ನು ತೀವ್ರವಾಗಿ ಟೀಕಿಸಿದ್ದಾರೆ.
ದಿನಬಳಕೆ ವಸ್ತುಗಳ ಬೆಲೆ ಏರಿಕೆ ಹಾಗೂ ತೆರಿಗೆ ಹೆಚ್ಚಳದ ವಿರುದ್ಧ ಜೆಡಿಎಸ್ ಪಕ್ಷದ ವತಿಯಿಂದ ಫ್ರೀಡಂ ಪಾರ್ಕ್ನಲ್ಲಿ ಹಮ್ಮಿಕೊಂಡಿದ್ದ ಉಗ್ರ ಪ್ರತಿಭಟನೆಯಲ್ಲಿ ಬಾಗಿಯಾಗಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸರ್ಕಾರ ಬಡವರ ಬದುಕಿನ ಮೇಲೆ ಬಂಡೆ ಉರುಳಿಸುತ್ತಿದೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ, ಕರುಣೆ, ಅಂತಃಕರಣ ಏನೇನೂ ಇಲ್ಲ” ಎಂದು ಟಿ.ಎ. ಶರವಣ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದ್ದು, ಸರ್ಕಾರದ ಬೊಕ್ಕಸ ಖಾಲಿ ಆಗಿದೆ. ಹಣವಿಲ್ಲದೆ ಸರ್ಕಾರ ನಡೆಸಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಜನಸಾಮಾನ್ಯರ ಹೊಟ್ಟೆ ಮೇಲೆ ಹೊಡೆದು, ಅವರ ಜೇಬಿಗೆ ಕತ್ತರಿ ಹಾಕಿ ಆಡಳಿತ ನಡೆಸಲಾಗುತ್ತಿದೆ. ಇದೊಂದು ‘ಪಿಕ್ ಪಾಕೆಟ್’ ಸರ್ಕಾರ ಎಂದು ದೂರಿದರು. ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಕುತೂಹಲ ಮೂಡಿಸಿದ ಸಿಎಂಗೆ ರಾಜಣ್ಣನ ಔತಣ ಕೂಟ
ನಂದಿನಿ ತುಪ್ಪದ ದರ ಏರಿಕೆ ಘೋರ ನಿರ್ಧಾರ
ನಂದಿನಿ ತುಪ್ಪದ ದರವನ್ನು ಕೆಜಿಗೆ 90 ರೂಪಾಯಿ ಏರಿಸಿರುವ ಸರ್ಕಾರದ ನಿರ್ಧಾರ ಹೀನಾಯ ಹಾಗೂ ಘೋರ ಎಂದು ಖಂಡಿಸಿದರು. ಹಾಲು ದರ ಏರಿಕೆಯ ನಂತರ, ಈಗ ತುಪ್ಪ ಸಹ ‘ಗಗನ ಕುಸುಮ’ವಾಗಿದೆ. ಬಡವರ ಮಕ್ಕಳು ತುಪ್ಪ ತಿನ್ನಲು ಸಾಧ್ಯವೇ?” ಎಂದು ಶಾಸಕರು ಪ್ರಶ್ನಿಸಿದರು.
ತೆರಿಗೆ ಭಯೋತ್ಪಾದಕ ಸರ್ಕಾರ
ಗ್ರೇಟರ್ ಬೆಂಗಳೂರಿನ ನಾಗರಿಕರ ಆಸ್ತಿಗಳ ಮೇಲೆ ಅಧಿಕವಾಗಿ ತೆರಿಗೆಯನ್ನು ವಿಧಿಸಿ ಸಂಕಷ್ಟಕ್ಕೆ ಸಿಲುಕಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅವರು “ತೆರಿಗೆ ಭಯೋತ್ಪಾದಕ ಸರ್ಕಾರ (Tax Terrorism Government)” ಎಂದು ಶರವಣ ತೀವ್ರವಾಗಿ ಖಂಡಿಸಿದರು.
“ಬಿ ಖಾತೆಯನ್ನು ಎ ಖಾತೆ ಮಾಡುವ ‘ಗೋಲ್ ಮಾಲ್’ ಧಂಧೆಯನ್ನು ನಡೆಸಲಾಗುತ್ತಿದೆ. ಇದು ದೋಖಾ. ಖಾಲಿಯಾದ ಖಜಾನೆಗೆ ಯಾವುದಾದರೂ ಮೂಲೆಯಿಂದ ಹಣ ಬರಲಿ ಎನ್ನುವ ಕಾರಣಕ್ಕೆ ಸರ್ಕಾರ ಸುಲಿಗೆಗೆ ಇಳಿದಿದೆ. ಇದು ‘ಎಕ್ಸ್ಟಾರ್ಷನ್’ ಸರ್ಕಾರ” ಎಂದು ಗಂಭೀರ ಆರೋಪ ಮಾಡಿದರು.
ಭೂ ಮಾಫಿಯಾ ಮತ್ತು ಹಫ್ತಾ ದಂಧೆ
ಭೂಮಿ ರಿಜಿಸ್ಟ್ರೇಷನ್ಗೆ ರಿಯಲ್ ಎಸ್ಟೇಟ್ ಉದ್ಯಮಿಗಳಿಂದ ಪ್ರತಿ ಅಡಿಗೆ 100 ರೂಪಾಯಿ ಪಡೆಯಲಾಗುತ್ತಿದೆ. ಇದರ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಶರವಣ ಆಗ್ರಹಿಸಿದರು.
