ಬೆಂಗಳೂರು: “ಟನಲ್ ರಸ್ತೆ ಯೋಜನೆ ಬಗ್ಗೆ ಬಿಜೆಪಿ ನಾಯಕರು ಟೀಕೆ ಬಿಟ್ಟು ಸಲಹೆಗಳನ್ನು ನೀಡಲಿ. ಈ ಯೋಜನೆ ನನ್ನ ಆಸ್ತಿಯಲ್ಲ. ಸಾರ್ವಜನಿಕರಿಗಾಗಿ ಮಾಡುತ್ತಿರುವ ಯೋಜನೆ. ನನಗೆ ಬಿಜೆಪಿಯವರು ಪರಿಹಾರ ಮಾತ್ರ ತಿಳಿಸಲಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದರು.
ಟನಲ್ ರಸ್ತೆ ವಿರೋಧಿಸಿ ಬಿಜೆಪಿಯವರು ಸಹಿ ಸಂಗ್ರಹ ಅಭಿಯಾನ ನಡೆಸುತ್ತಿರುವ ಬಗ್ಗೆ ಕೇಳಿದಾಗ, “ನನಗೂ ಸಹಿ ಸಂಗ್ರಹ ಅಭಿಯಾನಕ್ಕೆ ಕರೆ ನೀಡಲು ಗೊತ್ತಿದೆ. ಅವರಿಗಿಂತ ಹೆಚ್ಚು ಸಂಘಟನೆ ಮಾಡುವವನು ನಾನು. ಅವರು ಒಂದು ಸಂಸ್ಥೆ ಇಟ್ಟುಕೊಂಡು ಸಂಘಟನೆ ಮಾಡುತ್ತಿದ್ದಾರೆ. ನಾವು ಪಕ್ಷದ ಮೂಲಕವೇ ಸಂಘಟನೆ ಮಾಡುತ್ತಿದ್ದೇವೆ. ಯಾವುದೇ ಪರಿಹಾರ ಹೇಳದೆ ಟೀಕೆ ಮಾಡಿದರೆ ಏನು ಪ್ರಯೋಜನ? ಒಳ್ಳೆಯ ಸಲಹೆಗಳನ್ನು ನೀಡಿದರೆ ಒಪ್ಪಿಕೊಳ್ಳೋಣ” ಎಂದರು.
ಆರ್ ಎಸ್ ಎಸ್ ಇಲ್ಲದೇ ಹೋದರೆ ಬಿಜೆಪಿ ಶೂನ್ಯ
“ಆರ್ ಎಸ್ ಎಸ್ ಇಲ್ಲದೇ ಹೋದರೆ ಬಿಜೆಪಿಯು ಶೂನ್ಯ. ಬಿಜೆಪಿ ಬದುಕಿರುವುದೇ ಆರ್ ಎಸ್ ಎಸ್ ನಿಂದ. ಇದು ಬಿಟ್ಟರೆ ಬೇರೆ ಯಾವುದೇ ಅಸ್ತ್ರ ಅವರುಗಳ ಬಳಿ ಇಲ್ಲ. ಅವರಲ್ಲಿ ಶೇ. 20 ರಷ್ಟು ಜನ ಬಿಟ್ಟರೆ ಮಿಕ್ಕ ಎಲ್ಲರೂ ಕಲುಷಿತಗೊಂಡವರೇ. ದಳ, ಕಾಂಗ್ರೆಸ್ ಹಾಗೂ ಬೇರೆ, ಬೇರೆ ಪಕ್ಷಗಳಿಂದ ಹೋಗಿರುವವರೇ ಅಲ್ಲಿರುವುದು” ಎಂದು ತಿವಿದರು.
*ಮೆಟ್ರೋ ಸಂಚಾರ ಟನಲ್ ಮೂಲಕವೇ ಅಲ್ಲವೇ?*
“ಮೆಟ್ರೋ ಮಾರ್ಗ ಹೋಗುವುದು ಟನಲ್ ಮೂಲಕವೇ ಅಲ್ಲವೇ? ಈ ಯೋಜನೆ ತಂದವರು ಯಾರು? ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಹತ್ತು ದೇಶಗಳನ್ನು ತಿರುಗಿ ಅಧ್ಯಯನ ನಡೆಸಿ ವರದಿ ಮಾಡಿದ್ದೆ. ಎಸ್.ಎಂ. ಕೃಷ್ಣ ಅವರು, ಅನಂತಕುಮಾರ್ ಅವರು ಹಾಗೂ ನಾನು ದೆಹಲಿಗೆ ತೆರಳಿ ಅಂದಿನ ಪ್ರಧಾನಿಗಳಾದ ವಾಜಪೇಯಿ ಅವರಿಗೆ ವರದಿ ನೀಡಿದ್ದೆವು. ಹೀಗೆ ಯೋಜನೆ ಪ್ರಾರಂಭವಾಯಿತು” ಎಂದು ಹೇಳಿದರು.
*ತೇಜಸ್ವಿ ಸೂರ್ಯ ದೊಡ್ಡ ನಾಯಕ; ಅಮೆರಿಕಾದಲ್ಲಿ ಉಗಿಸಿಕೊಂಡು ಬಂದಿದ್ದ*
ಸಂಸದ ತೇಜಸ್ವಿ ಸೂರ್ಯ, ಶಾಸಕ ರಾಮಮೂರ್ತಿಗೆ ಶಿವಕುಮಾರ್ ಧಮ್ಕಿ ಹಾಕುತ್ತಿದ್ದಾರೆ ಎನ್ನುವ ಅಶೋಕ್ ಅವರ ಆರೋಪದ ಬಗ್ಗೆ ಕೇಳಿದಾಗ, “ನಾನೇಕೆ ಧಮ್ಕಿ ಹಾಕಲಿ? ರಾಮಮೂರ್ತಿ ನಮ್ಮ ಹುಡುಗ. ತೇಜಸ್ವಿ ಸೂರ್ಯ ದೊಡ್ಡ ನಾಯಕ, ಅತೀ ಬುದ್ದಿವಂತ. ಅದಕ್ಕೆ ವಿಮಾನದ ತುರ್ತು ನಿರ್ಗಮನ ದ್ವಾರವನ್ನೇ ತೆರೆಯಲು ಹೋಗಿದ್ದ. ಯಾವುದೇ ಅನುಮತಿ ಇಲ್ಲದೇ ಅಮೆರಿಕ ಅಧ್ಯಕ್ಷ ಟ್ರಂಪ್ ಭೇಟಿ ಮಾಡಲು ಹೋಗಿ ಉಗಿಸಿಕೊಂಡು ಬಂದವನು. ಈಗ ಕಾರಲ್ಲಿ ಓಡಾಡಬೇಡಿ ಎನ್ನುತ್ತಾನೆ. ಮದುವೆಯಾಗುವ ವೇಳೆಯಲ್ಲಿ ಹೊಸ ಕಾರು ಬೇಕು ಎಂದು ಅರ್ಜಿ ನೀಡಿದ್ದ. ದಾಖಲೆ ಬಿಡುಗಡೆ ಮಾಡಿ ಎಂದರೆ ಬಿಡುಗಡೆ ಮಾಡುತ್ತೇವೆ” ಎಂದು ವ್ಯಂಗ್ಯವಾಡಿದರು.
