ಬೆಂಗಳೂರು: ಡಿ.ಕೆ.ಶಿವಕುಮಾರ್ ಅವರ ರಾಜಕಾರಣ ಬೆಂಗಳೂರಿಗೆ ಮತ್ತು ವಿಧಾನಸೌಧದ ಸುತ್ತ ತಿರುಗುತ್ತಿದೆ. ಬೇಗ ಸಿಎಂ ಆಗಬೇಕೆಂಬುದು ಬಿಟ್ಟರೆ ತಲೆಯಲ್ಲಿ ಇನ್ನೇನೂ ಇಲ್ಲ ಎಂದು ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಅವರು ಟೀಕಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು (ಶುಕ್ರವಾರ ಅ. 31) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ, ಮಹಿಳೆಯರ ಕೊಲೆ, ಬಾಲಕಿಯರ ಮೇಲಿನ ಅತ್ಯಾಚಾರ ನಿರಂತರವಾಗಿ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನೀವು ಯಾರನ್ನಾದರೂ ಮುಖ್ಯಮಂತ್ರಿ ಮಾಡಿ; ಆದರೆ, ಮಹಿಳಾ ರಕ್ಷಣೆ ನಿಮ್ಮ ಆದ್ಯತೆಯಾಗಿರಲಿ ಎಂದು ಒತ್ತಾಯಿಸಿದ್ದಾರೆ. ಗೃಹ ಸಚಿವರು ಏನು ಕೆಲಸ ಮಾಡುತ್ತಿದ್ದಾರೆಂದು ಗೊತ್ತಿಲ್ಲ; ರಾಜ್ಯದ ಸಚಿವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಭೆ ನಡೆಸುತ್ತಾರೋ ಎಂಬುದೂ ಗೊತ್ತಿಲ್ಲ. ಗೃಹ ಸಚಿವರು ವಿವಿಧ ಜಿಲ್ಲೆಗಳಲ್ಲಿ ಎಸ್ಪಿ ಮತ್ತು ಪೊಲೀಸ್ ಅಧಿಕಾರಿಗಳ ಸಭೆ ನಡೆಸಬೇಕು; ಕಾನೂನು- ಸುವ್ಯವಸ್ಥೆಯ ಪರಿಶೀಲನೆ ಮಾಡಬೇಕು. ಆದರೆ, ಇವರು ಬೆಂಗಳೂರು ಬಿಟ್ಟು ಹೊರಟರೆ ತುಮಕೂರು ಎಂಬಂತಿದೆ ಎಂದು ಆಕ್ಷೇಪಿಸಿದರು. ಇದನ್ನೂ ಓದಿ: ಬಿಜೆಪಿಗೂ RSS ಗೂ ಏನು ಸಂಬಂಧ?: ಪ್ರಿಯಾಂಕ್ ಖರ್ಗೆ
ದುಡ್ಡು ಕೈ ಸೇರಿದರಷ್ಟೇ ವರ್ಗಾವಣೆ
ಪೊಲೀಸರ ಟೊಪಿ ಬದಲಿಸುವ ಕುರಿತು ಸರಕಾರ ಯೋಚಿಸಿದೆ. ಅವರ ಕೈಗಳನ್ನು ಶಕ್ತಿಯುತವಾಗಿ ಮಾಡುವ ಕಡೆ ಗಮನಿಸಿಲ್ಲ ಎಂದು ಆಕ್ಷೇಪಿಸಿದರು. ದುಡ್ಡು ಕೊಡದೆ ಟ್ರಾನ್ಸ್ಫರ್ ಆಗುವುದಿಲ್ಲ; ವರ್ಗಾವಣೆಗೆ ಯಾವ ಪೊಲೀಸ್ ಠಾಣೆ ಎಂಬುದಕ್ಕೆ ನಿಗದಿತ ಮೊತ್ತ ಇದೆ. ದುಡ್ಡು ಕೈ ಸೇರಿದರಷ್ಟೇ ವರ್ಗಾವಣೆ ಆಗುತ್ತದೆ ಎಂದು ಕು.ಶೋಭಾ ಕರಂದ್ಲಾಜೆ ಅವರು ಆರೋಪಿಸಿದರು.
ನನ್ನ ಕ್ಷೇತ್ರದ ಪೊಲೀಸ್ ಠಾಣೆಗಳಲ್ಲಿ ಆರು ತಿಂಗಳಿಗೊಮ್ಮೆ 10 ತಿಂಗಳಿಗೆ ಒಮ್ಮೆ ವರ್ಗಾವಣೆ ಮಾಡುತ್ತಾರೆ. ಪದೇಪದೇ ಪೊಲೀಸ್ ಅಧಿಕಾರಿಗಳನ್ನು ಬದಲಾಯಿಸುತ್ತಾರೆ. ಯಾಕೆ? ಒಂದು ಸಾರಿ ದುಡ್ಡು ಕೊಟ್ಟರೆ ಅದರ ಮೌಲ್ಯ 10 ತಿಂಗಳಿಗೆ ಮಾತ್ರ. ಆಮೇಲೆ ಉಳಿಯಲು ಹೊಸದಾಗಿ ದುಡ್ಡು ಕೊಡಬೇಕು. ಇಲ್ಲವಾದರೆ ಅವರಿಗೆ ವರ್ಗಾವಣೆ ಮಾಡಿ, ಹೆಚ್ಚು ದುಡ್ಡು ಕೊಡುವವರು ಬರುತ್ತಾರೆ ಎಂದು ಟೀಕಿಸಿದರು. ದುಡ್ಡು, ವರ್ಗಾವಣೆ ವ್ಯವಹಾರದಿಂದ ನಮ್ಮ ಅಧಿಕಾರಿಗಳು ಆತ್ಮವಿಶ್ವಾಸ ಕಳಕೊಂಡಿದ್ದಾರೆ ಎಂದರು.
